ರಾಯಚೂರು : ಇತ್ತೀಚಿಗೆ ಬೀಡಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇದೀಗ ರಾಯಚೂರಿನಲ್ಲಿ ಏಕಾಏಕಿ 15 ಜನರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ್ದು, ಗಾಯಗೊಂಡ 8 ಜನರನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ನಗರದ ಗಂಗಾನಿವಾಸ ಹಾಗೂ ಟ್ಯಾಂಕ್ ಬಂಡ್ ಸುತ್ತಮುತ್ತಲಿನ ಪ್ರದೇಶದಲ್ಲಿ ಬೀದಿ ನಾಯಿಗಳು ಏಕಾಏಕಿ ದಾಳಿ ಮಾಡಿದ್ದರಿಂದ ಹುಚ್ಚುನಾಯಿ ಕಡಿತ ಶಂಕೆ ಎದುರಾಗಿದ್ದು, ಗಾಯಾಳುಗಳು ಆತಂಕಗೊಂಡಿದ್ದಾರೆ. ಓರ್ವ ಬಾಲಕ ಸೇರಿದಂತೆ ಗಾಯಗೊಂಡ ಎಂಟು ಜನರನ್ನು ನಗರದ ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿದೆ.
ಸಿಕ್ಕಸಿಕ್ಕವರ ಕೈ, ಕಾಲಿಗೆ ಹಾಗೂ ಮೈ ಮೇಲೆ ಎಗರಿ ಗಾಯಗೊಳಿಸಿವೆ. ಲಿಂಗಪ್ಪ, ಶರಣಪ್ಪ, ರಮೇಶ್, ಮೊಹಮದ್ ಗೌಸ್ ಸೇರಿ 15 ಜನರು ಗಾಯಗೊಂಡಿದ್ದು, ಪಾಲಿಕೆ ವಿರುದ್ದ ಗಾಯಾಳುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳು ಮತ್ತು ಪಾದಚಾರಿಗಳ ಮೇಲೆ ನಾಯಿಗಳ ಹಿಂಡು ದಾಳಿ ಮಾಡುತ್ತಿರುವ ಘಟನೆಗಳು ಹೆಚ್ಚುತ್ತಿದ್ದು, ಬೀದಿ ನಾಯಿಗಳನ್ನು ಹಿಡಿದು ಸ್ಥಳಾಂತರ ಮಾಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.