ಬೆಂಗಳೂರು : ನಗರದ ಪೊಲೀಸರ ಹೆಸರಿನಲ್ಲಿ ಮಹಿಳೆಯೊಬ್ಬರಿಗೆ ಡಿಜಿಟಲ್ ಅರೆಸ್ಟ್‌ಗೊಳ ಪಡಿಸಿ ಹಣ ಸುಲಿಗೆಗೆ ಕಿಡಿಗೇಡಿಗಳು ಯತ್ನಿಸಿರುವ ಘಟನೆ ನಡೆದಿದೆ. ಈ ಸಂಬಂಧ ಇ-ಮೇಲ್ ಮೂಲಕ ಪೊಲೀಸರಿಗೆ ಸಂತ್ರಸ್ತೆ ದೂರು ನೀಡಿದ್ದು, ನಗರ ಪೊಲೀಸ್ ಆಯುಕ್ತರ ಸಹಿ ಹಾಗೂ ಕಚೇರಿ ಸೀಲ್ ನಕಲು ಮಾಡಿ ಸಂತ್ರಸ್ತೆಗೆ ನೋಟಿಸ್ ನೀಡಿ ವಂಚನೆಗೆ ಯತ್ನಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ಕೃತ್ಯದಲ್ಲಿ ತೊಡಗಿರುವುದಾಗಿ ಸಂತ್ರಸ್ತೆ ತಾಯಿಗೆ ನಗರ ಪೊಲೀಸ್ ಸೋಗಿನಲ್ಲಿ ಅಪರಿಚಿತ ಕರೆ ಮಾಡಿದ್ದಾನೆ. ಬಳಿಕ ತಮ್ಮ ಮಗಳಿಗೆ ಅವರು ಮೊಬೈಲ್ ಕೊಟ್ಟಿದ್ದಾರೆ. ಆ ಕರೆ ಸ್ವೀಕರಿಸಿದ ಸಂತ್ರಸ್ತೆಗೆ ನಿಮ್ಮ ತಾಯಿ ವಿರುದ್ಧ ಕೇಳಿ ಬಂದಿರುವ ಆರ್ಥಿಕ ವಂಚನೆ ಕೃತ್ಯದ ತನಿಖೆಗೆ ನಗರ ಪೊಲೀಸ್ ಆಯುಕ್ತರ ಆದೇಶವಿದೆ ಎಂದಿದ್ದಾನೆ.
ಅಲ್ಲದೆ ವಾಟ್ಸಪ್‌ನಲ್ಲಿ ಆಯುಕ್ತರ ಸಹಿಯುಳ್ಳ ಆದೇಶದ ಪ್ರತಿಯನ್ನು ಕಳುಹಿಸಿದ್ದಾನೆ. ಈ ಕರೆ ಬಗ್ಗೆ ಶಂಕೆಗೊಂಡ ಅವರು, ಕೂಡಲೇ ಕರೆ ಸ್ಥಗಿತಗೊಳಿಸಿ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇಷ್ಟು ದಿನ ಇಡಿ ಅಧಿಕಾರಿಗಳು ಹಾಗೂ ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ನಡೆಯುತ್ತಿದ್ದ ಡಿಜಿಟಲ್ ಅರೆಸ್ಟ್ ಪ್ರಕರಣಗಳು, ಇದೀಗ ಸ್ಥಳೀಯ ನಗರ ಪೊಲೀಸ್ ಅವರ ಹೆಸರಿನಲ್ಲಿಯೇ ನಡೆಯುತ್ತಿರುವುದು ಆತಂಕಕ್ಕೆ ಎಡಿಮಾಡಿಕೊಟ್ಟಿದೆ.








