ಬೆಂಗಳೂರು : ಅನುಕಂಪದ ಆಧಾರದ ಮೇಲೆ ನೇಮಕಾತಿ ಕೋರಿ ಸಲ್ಲಿಸುವ ಅರ್ಜಿಗಳನ್ನು ನಿಗದಿತ ಕಾಲಮಿತಿಯಲ್ಲಿ ಇತ್ಯರ್ಥಗೊಳಿಸುವ ಬಗ್ಗೆ ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ.
ಮಾನ್ಯ ಸರ್ವೋಚ್ಚ ನ್ಯಾಯಾಲಯವು ಉಮೇಶ್ ಕುಮಾರ್ ನಾಗಪಾಲ್ ವಿರುದ್ಧ ಹರಿಯಾಣ ರಾಜ್ಯ ಮತ್ತು ಇತರರು (1994) 4 SCC 138) ಪ್ರಕರಣದಲ್ಲಿ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ, ಸರ್ಕಾರ ದಿನಾಂಕ: 12.09.1996 ರ ಉಲ್ಲೇಖ (1) ರ ಅಧಿಸೂಚನೆಯಲ್ಲಿ ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು, 1996 ನ್ನು ರಚಿಸಿದ್ದು, ಈ ನಿಯಮಗಳು ದಿನಾಂಕ 13.09.1996 ರಿಂದ ಜಾರಿಗೆ ಬಂದಿರುತ್ತವೆ. ಈ ನಿಯಮಗಳನ್ನು ಕಾಲ ಕಾಲಕ್ಕೆ ತಿದ್ದುಪಡಿ ಮಾಡಲಾಗಿರುತ್ತದೆ. ದಿನಾಂಕ 09.04.2021 ರ ಉಲ್ಲೇಖ (2) ರ ಅಧಿಸೂಚನೆಯಲ್ಲಿ 1996 ರ ಸದರಿ ನಿಯಮಗಳಿಗೆ ವ್ಯಾಪಕವಾದ ತಿದ್ದುಪಡಿಗಳನ್ನು ಮಾಡಲಾಗಿರುತ್ತದೆ.
ದಿನಾಂಕ 12.11.2024 ರ ಉಲ್ಲೇಖ (3) ರ ಸುತ್ತೋಲೆಯಲ್ಲಿ ಮತ್ತು ದಿನಾಂಕ 13.01.2025 ರ ಉಲ್ಲೇಖ (4) ರ ಸುತ್ತೋಲೆಯಲ್ಲಿ ಎಲ್ಲಾ ನೇಮಕಾತಿ ಪ್ರಾಧಿಕಾರಗಳಿಗೆ ಸೂಚನೆಗಳನ್ನು ನೀಡಲಾಗಿರುತ್ತದೆ.
2. ಸರ್ಕಾರಿ ನೌಕರನು ಸೇವೆಯಲ್ಲಿರುವಾಗಲೇ ಮೃತನಾದಾಗ, ಆತನ ಅವಲಂಬಿತರು ಅನುಕಂಪದ ಆಧಾರದ ನೇಮಕಾತಿ ಕೋರಿ ಅರ್ಜಿ ಸಲ್ಲಿಸಿದಾಗ, ಅಂತಹ ಅರ್ಜಿಗಳನ್ನು ಪರಿಗಣಿಸುವುದಕ್ಕೆ ಸಂಬಂಧಿಸಿದಂತೆ ಮಾನ್ಯ ಉಚ್ಚ ನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ 202187/2023 (ಎಸ್-ಕೆಎಟಿ) – ರಾಜ್ಯ ಸರ್ಕಾರ ವಿರುದ್ಧ ಶ್ರೀ ಮೆಹಬೂಬ್ ಪಟೇಲ್ ಪ್ರಕರಣದಲ್ಲಿ ದಿನಾಂಕ 25.07.2025 ರಂದು ನೀಡಿರುವ ತನ್ನ ಆದೇಶದಲ್ಲಿ ಈ ಕೆಳಕಂಡಂತೆ ನಿರ್ದೇಶನಗಳನ್ನು ನೀಡಿರುತ್ತದೆ:
“22. ಸಹಾನುಭೂತಿಯ ನೇಮಕಾತಿ ವಿಷಯಗಳು ದುಃಖಿತ ಕುಟುಂಬಗಳಿಗೆ ತಕ್ಷಣದ ಆರ್ಥಿಕ ಪರಿಹಾರವನ್ನು ಒದಗಿಸಲು ವಿನ್ಯಾಸಗೊಳಿಸಲಾದ ಕಲ್ಯಾಣ ಕ್ರಮವಾಗಿದ್ದು, ರಾಜ್ಯವು ಕಾರ್ಯವಿಧಾನದ ನ್ಯಾಯಯುತತೆಯ ಹೆಚ್ಚಿನ ಕರ್ತವ್ಯವನ್ನು ಹೊಂದಿದೆ. ಸಕಾಲಿಕ ಅರ್ಜಿಯನ್ನು, ವಿಶೇಷವಾಗಿ ಅನಕ್ಷರಸ್ಥ ಅಥವಾ ವಿಧವೆಯಿಂದ ಸಲ್ಲಿಸಿದಾಗ, ಅಧಿಕಾರಿಗಳು ಕಟ್ಟುನಿಟ್ಟಾಗಿ, ಪಾರದರ್ಶಕವಾಗಿ ಮತ್ತು ಸಹಾಯಕವಾಗಿ ಕಾರ್ಯನಿರ್ವಹಿಸಬೇಕು ಹಾಗೆ ಮಾಡಲು ವಿಫಲವಾದರೆ, ಸರಿಯಾದ ಅವಲಂಬಿತರಿಗೆ ಅವರ ಅವಕಾಶವನ್ನು ನಿರಾಕರಿಸಬಹುದು.
23. ಅಂತಹ ಪರಿಸ್ಥಿತಿ ಮರುಕಳಿಸುವುದನ್ನು ತಡೆಯಲು ಮತ್ತು ಅನುಕಂಪದ ನೇಮಕಾತಿ ಪ್ರಕ್ರಿಯೆಯಲ್ಲಿ ಸ್ಪಷ್ಟತೆ, ಪಾರದರ್ಶಕತೆ ಮತ್ತು ಕಾರ್ಯವಿಧಾನದ ನ್ಯಾಯಸಮ್ಮತತೆಯನ್ನು ತರಲು, ನಾವು ಈ ಕೆಳಗಿನ ನಿರ್ದೇಶನಗಳನ್ನು ನೀಡುತ್ತೇವೆ.
i) ಅನುಕಂಪದ ನೇಮಕಾತಿಗಾಗಿ ಪ್ರತಿ ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಅಥವಾ ಇಲ್ಲದೆ, ಪ್ರಾಧಿಕಾರವು 30 ದಿನಗಳ ಒಳಗೆ ಲಿಖಿತವಾಗಿ ಸ್ವೀಕರಿಸಬೇಕು ಮತ್ತು ಸ್ಪಷ್ಟ ಸಂವಹನದೊಂದಿಗೆ
ಎ) ಅರ್ಜಿಯ ಸ್ಥಿತಿ (ಅಪೂರ್ಣ ಅಥವಾ ಸಂಪೂರ್ಣ),
ಬಿ) ಸ್ವರೂಪ/ದಾಖಲೆಯಲ್ಲಿನ ಯಾವುದೇ ದೋಷಗಳು;
ಸಿ) ಇತರ ಅವಲಂಬಿತರು ಅರ್ಜಿ ಸಲ್ಲಿಸುವ ಹಕ್ಕುಗಳು,
d) ಅನ್ವಯವಾಗುವ ಮಿತಿ ಅವಧಿ,
ii) ಅರ್ಜಿದಾರರು ವಿಧವೆ, ಅನಕ್ಷರಸ್ಥ ಅಥವಾ ಇತರ ಸಂದರ್ಭಗಳಲ್ಲಿ, ಸಂಬಂಧಪಟ್ಟ ಇಲಾಖೆಗಳು ಅರ್ಜಿಯನ್ನು ಸರಿಯಾದ ನಮೂನೆಯಲ್ಲಿ ಸಲ್ಲಿಸಲು ಸಹಾಯ ಮಾಡಲು ಮತ್ತು ಇತರ ಅವಲಂಬಿತರು ಅರ್ಜಿ ಸಲ್ಲಿಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾರ್ಗದರ್ಶನ ನೀಡಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಬೇಕು;
iii) ಎಲ್ಲಾ ಅರ್ಜಿಗಳನ್ನು ಅರ್ಜಿ ಸ್ವೀಕರಿಸಿದ ದಿನಾಂಕದಿಂದ ಗರಿಷ್ಠ 90 ದಿನಗಳ ಒಳಗೆ ನಿರ್ಧರಿಸಬೇಕು. ಅರ್ಜಿಯು ನಿರ್ವಹಣೆಗೆ ಯೋಗ್ಯವಾಗಿಲ್ಲ ಎಂದು ಕಂಡುಬಂದರೆ, ಅರ್ಜಿದಾರರಿಗೆ ತಕ್ಷಣವೇ ಸಮಂಜಸವಾದ ಆದೇಶವನ್ನು ತಿಳಿಸಬೇಕು.
iv) ಕಾರ್ಯವಿಧಾನದ ಲೋಪಗಳು ಸಂಭವಿಸದಂತೆ ನೋಡಿಕೊಳ್ಳಲು ಸರ್ಕಾರವು ಏಕರೂಪದ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನ (SOP) ಮತ್ತು ಅನುಕಂಪದ ನೇಮಕಾತಿಯನ್ನು ನಿರ್ವಹಿಸುವ ಅಧಿಕಾರಿಗಳಿಗೆ ತರಬೇತಿ ನೀಡಬೇಕು.
ಅನುಕಂಪದ ನೇಮಕಾತಿಗಾಗಿ ಅರ್ಜಿಗಳನ್ನು ಮೇಲೆ ತಿಳಿಸಲಾದ ಸಮಯದೊಳಗೆ ನಿರ್ಧರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರವು ಎಲ್ಲಾ ಇಲಾಖಾ ಮುಖ್ಯಸ್ಥರಿಗೆ ಸೂಕ್ತ ಸೂಚನೆಗಳನ್ನು ನೀಡಬೇಕು.
3. ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು, 1996 ರನ್ವಯ ಮೃತ ಸರ್ಕಾರಿ ನೌಕರನ ಅವಲಂಬಿತರು ಅನುಕಂಪದ ಆಧಾರದ ನೇಮಕಾತಿ ಕೋರಿ ಅರ್ಜಿ ಸಲ್ಲಿಸಿದಾಗ, ಅಂತಹ ಅರ್ಜಿಗಳನ್ನು ಮಾನ್ಯ ಉಚ್ಚ ನ್ಯಾಯಾಲಯವು ಮೇಲ್ಕಂಡ ಪ್ರಕರಣದಲ್ಲಿ ನೀಡಿರುವ ನಿರ್ದೇಶನಗಳನ್ವಯ ನಿಗದಿಪಡಿಸಿರುವ ಕಾಲಮಿತಿಯಲ್ಲಿ ಇತ್ಯರ್ಥಪಡಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಎಲ್ಲಾ ಸಕ್ಷಮ / ನೇಮಕಾತಿ ಪ್ರಾಧಿಕಾರಗಳಿಗೆ ಈ ಮೂಲಕ ಕಟ್ಟುನಿಟ್ಟಾಗಿ ಸೂಚಿಸಿದೆ.









