ಉತ್ತರಕನ್ನಡ : ಈ ಹಿಂದೆ ನಿರ್ಮಾಪಕ ಉಮಾಪತಿ ಹಾಗೂ ನಟ ದರ್ಶನ್ ಒಟ್ಟಿಗೆ ಹಲವು ಸಿನಿಮಾ ಮಾಡಿದ್ದರು. ಅದಾದ ಬಳಿಕ ಉಮಾಪತಿ ವಿರುದ್ಧ ದರ್ಶನ್ ವಂಚನೆ ಆರೋಪ ಮಾಡಿದ್ದರು. ಇದೀಗ ವಿಮಾಪಕ ಉಮಾಪತಿಯವರು ಪರೋಕ್ಷವಾಗಿ ನಟ ದರ್ಶನ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಜೈಲಿಗೆ ಹೋಗಿ ಬಂದವರಿಗೆಲ್ಲ ನಾನು ಹೆದರುವುದಿಲ್ಲ ಎಂದು ಟಾಂಗ್ ನೀಡಿದ್ದಾರೆ.
ಇಂದು ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಹಲಗಡಿಕೊಪ್ಪ ಗ್ರಾಮ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಈ ವೇಳೆ ಮಾತನಾಡಿದ ಉಮಾಪತಿ,ನನ್ನನ್ನು ಭಯಪಡಿಸುವ ಶಕ್ತಿ ಯಾರಿಗೂ ಇಲ್ಲ. ನಾನು ಸರಿಯಾದ ದಾರಿಯಲ್ಲಿ ಸಂಪಾದನೆ ಮಾಡಿದ್ದೇನೆ. ಸಾಯೋವರೆಗೂ ಇನ್ನೊಬ್ಬರಿಗೆ ಮಾದರಿಯಾಗಿ ಇರುತ್ತೇನೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬದುಕಿನಲ್ಲಿ ಎರಡು ಮಾದರಿಯ ಜನ ಇರುತ್ತಾರೆ. ಇನ್ನೊಬ್ಬರಿಗೆ ಮಾದರಿಯಾಗಿ ಬದುಕೋದು ಒಂದು ವರ್ಗ, ಎಚ್ಚರಿಕೆ ಕೊಡುವ ಬದುಕುವ ಮತ್ತೊಂದು ವರ್ಗ ಇರುತ್ತದೆ. ಜೈಲಿಗೆ ಹೋಗಿ ಬಂದವರು ಇನ್ನೊಬ್ಬರಿಗೆ ಎಚ್ಚರಿಕೆ ಕೊಡುವವರು ಇನ್ನೊಬ್ಬರಿಗೆ ತೊಂದರೆ ಕೊಟ್ಟು ನಶಿಸಿ ಹೋಗುವವರು ಒಂದು ವರ್ಗ. ನಿಮ್ಮ ಮಕ್ಕಳನ್ನು ಹೇಗೆ ಬೆಳೆಸಬೇಕೆಂಬುದನ್ನು ನೀವೇ ನಿರ್ಧರಿಸಿ. ನಮಗೆ ಬಂದ ತೊಂದರೆಗಳಿಗೆ ಎಂದೋ ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು. ಆದರೆ ಅದ್ಯಾವುದಕ್ಕೂ ನಾವು ಭಯಪಟ್ಟಿಲ್ಲ ಎಂದು ಪರೋಕ್ಷವಾಗಿ ನಟ ದರ್ಶನ್ ಗೆ ನಿರ್ಮಾಪಕ ಉಮಾಪತಿ ಟಾಂಗ್ ನೀಡಿದ್ದಾರೆ.
ನಾನಿವತ್ತು ಈ ವೇದಿಕೇಲಿ ನಿಂತಿದಿನಿ ಅಂದರೆ ಅನೇಕ ಕಷ್ಟಗಳನ್ನ ಎದುರಿಸಿದ್ದೀನಿ, ಅನೇಕ ತಂಟೆ ತಕರಾರುಗಳನ್ನು ಎದುರಿಸಿದ್ದೀನಿ, ಸುಮಾರು ಜನ ಕೇಳುತ್ತಲೇ ಇರುತ್ತಾರೆ, ನೀನು ದೊಡ್ಡವರನ್ನು ಎದುರು ಹಾಕ್ಕೊಂಡು ಏನಪ್ಪಾ ಮಾಡ್ತಿಯಾ ಅಂತ, ಅದಕ್ಕೆ ನಾನು ಹೇಳೋದು, ನಾನು ಎದುರು ಹಾಕ್ಕೊಳಲ್ಲ, ನನ್ನವರು ಎದುರು ಹಾಕ್ಕೊಡ್ತಾರೆ ಅಂತ. ನಾವು ಮಾಡೋ ಕೆಲ್ಸ ಒಳ್ಳೇದಿದ್ರೆ ನಾವು ಯಾರಿಗೂ ಭಯ ಪಡಬೇಕಿಲ್ಲ. ಒಳ್ಳೇ ಕೆಲಸ ಮಾಡೋರಿಗೆ ನಾವು ಭಯ ಬೀಳಬೇಕು ಅಷ್ಟೇ, ಯಾವುದೇ ಕಾರಣಕ್ಕೂ ನಾನು ಯಾವುದಕ್ಕೂ ಭಯ ಬೀಳಲ್ಲ, ನನ್ನ ಭಯ ಬಿಳಿಸೋ ಶಕ್ತಿ ಯಾರಿಗೂ ಇಲ್ಲ ಎಂದಿದ್ದಾರೆ.