ಬೆಂಗಳೂರು: 2025ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಮಾದರಿ ಪ್ರಶ್ನೆ ಪತ್ರಿಕೆಯನ್ನು ಬಿಡುಗಡೆ ಮಾಡಲಾಗಿದೆ.
ಈ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, 2024-25ನೇ ಸಾಲಿನ ದ್ವಿತೀಯ ಪಿಯುಸಿ ಎಲ್ಲಾ ವಿಷಯಗಳ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಪದವಿ ಪೂರ್ವ ಪಠ್ಯಕ್ರಮ ಬೋಧಿಸುವ ಉಪನ್ಯಾಸಕರಿಂದ ತಯಾರಿಸಿ ಮಂಡಳಿಯ https://dpue-exam.karnataka.gov.in/ModelQp2025/frmkmpdamodelpapers ಜಾಲತಾಣದಲ್ಲಿ ಅಪ್ ಲೋಡ್ ಮಾಡಲಾಗಿದೆ ಅಂತ ತಿಳಿಸಿದೆ.
ಇನ್ನೂ ಈ ಹಿಂದೆ ಲಿಖಿತ ಪರೀಕ್ಷೆಗೆ 100 ಅಂಕಗಳ ಪ್ರಶ್ನೆ ಪತ್ರಿಕೆಗಳ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿತ್ತು. ಈ ಕಾರಣದಿಂದಾಗಿ 3 ಗಂಟೆ 15 ನಿಮಿಷ ಕಾಲಾವಕಾಶ ನೀಡಲಾಗುತ್ತಿತ್ತು. ಆದರೇ ಈಗ 70 ರಿಂದ 80 ಅಂಕಗಳ ಪ್ರಶ್ನೆ ಪತ್ರಿಕೆಗೆ ಉತ್ತರಿಸಬೇಕಾಗಿದೆ. ಈ ಹಿನ್ನಲೆಯಲ್ಲಿ ಪರೀಕ್ಷಾ ಅವಧಿಯನ್ನು 3 ಗಂಟೆಗೆ ಮಿತಿಗೊಳಿಸಲಾಗಿದೆ. ಈ ಕಾಲವಾಶದಲ್ಲಿ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಯನ್ನು ಓದಿ ಕೊಳ್ಳೋದಕ್ಕೆ 15 ನಿಮಿಷ ನೀಡಿದ್ದರೇ, ಪ್ರಶ್ನೆಗಳಿಗೆ ಲಿಖಿತ ಉತ್ತರ ನೀಡಲು 2 ಗಂಟೆ 45 ನಿಮಿಷ ಇರುತ್ತದೆ.
ಪರೀಕ್ಷಾ ದಿನಗಳಂದು ಪರೀಕ್ಷೆಯನ್ನು ಬೆಳಗಿನ ಅವಧಿಯಲ್ಲಿ ಬೆಳಿಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಾಗೂ ಮಧ್ಯಾಹ್ನದ ಅವಧಿಯಲ್ಲಿ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಸುವುದು.
ಪ್ರತಿ ವಿಷಯದ ಪ್ರಶ್ನೆ ಪತ್ರಿಕೆಯಲ್ಲಿ ವಿದ್ಯಾರ್ಥಿಗಳು ಉತ್ತರಿಸಬೇಕಾದ ಗರಿಷ್ಠ ಅಂಕಗಳ ಶೇಕಡ 50 ರಷ್ಟು ಅಂಕಗಳಿಗೆ ಆಯ್ಕೆ ಪ್ರಶ್ನೆಗಳನ್ನು ನೀಡಲಾಗಿದೆ. ಪ್ರಾಯೋಗಿಕ ಪರೀಕ್ಷೆ ಇರುವ ವಿಷಯಗಳಲ್ಲಿ ಭೌತಶಾಸ್ತ್ರ,, ರಸಾಯನಶಾಸ್ತ್ರ, ಜೀವಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ, ಗೃಹ ವಿಜ್ಞಾನ) ಪ್ರಶ್ನೆ ಪತ್ರಿಕೆಗಳ ಗರಿಷ್ಠ ಅಂಕಗಳು 70 ಇದ್ದು ಪ್ರಶ್ನೆ ಪತ್ರಿಕೆಯಲ್ಲಿ ಆಯ್ಕೆ ಪ್ರಶ್ನೆಗಳನ್ನೊಳಗೊಂಡಂತೆ 105 ಅಂಕಗಳಿಗೆ ಪ್ರಶ್ನೆಗಳಿರುತ್ತವೆ. ಹಾಗೆಯೇ ಪ್ರಯೋಗ ರಹಿತ ವಿಷಯಗಳಲ್ಲಿ (NSQF ಮತ್ತು ಹಿಂದುಸ್ತಾನಿ ಸಂಗೀತ. ಹೊರತುಪಡಿಸಿ) ಪುಶ್ನೆ ಪತ್ರಿಕೆಗಳಲ್ಲಿ ಗರಿಷ್ಠ ಅಂಕಗಳು 80 ಇದ್ದು, ಪ್ರಶ್ನೆ ಪತ್ರಿಕೆಯಲ್ಲಿ ಆಯ್ಕೆ ಪ್ರಶ್ನೆಗಳನ್ನೊಳಗೊಂಡಂತೆ 120 ಅಂಕಗಳಿಗೆ ಪ್ರಶ್ನೆಗಳಿರುತ್ತವೆ.
ಪ್ರತಿ ಮಾದರಿ ಪ್ರಶ್ನೆ ಪತ್ರಿಕೆಯು ಪ್ರತ್ಯೇಕ ನೀಲ ನಕ್ಷೆ (blue print) ಹೊಂದಿದ್ದು, ಈ ನೀಲನಕ್ಷೆಗಳು ಕೊಟ್ಟಿರುವ ಮಾದರಿ ಪ್ರಶ್ನೆ ಪತ್ರಿಕೆಗಳಿಗೆ ಮಾತ್ರ ಸೀಮಿತವಾಗಿರುತ್ತವೆ. ನೀಲನಕ್ಷೆಯು ಒಂದೇ ವಿಷಯದ ಬೇರೆ ಬೇರೆ ಪ್ರಶ್ನೆಪತ್ರಿಕೆಗಳಿಗೆ ಬೇರೆ ಬೇರೆಯಾಗಿರುತ್ತದೆ.
ಪ್ರತಿ ವಿಷಯದಲ್ಲೂ ಪ್ರಶ್ನೆಪತ್ರಿಕೆಯನ್ನು ತಯಾರಿಸುವಾಗ ಬೋಧನಾ ಅವಧಿ ಹಾಗೂ ವಿದ್ಯಾರ್ಥಿಗಳ ಅರಿವಿನ ಮಟ್ಟಗಳಿಗೆ (Teaching hour wise and cognitive level wise weightage) ನಿರ್ದಿಷ್ಟ ಅಂಕಗಳನ್ನು ನಿಗದಿಪಡಿಸಿ ಏಕರೂಪತೆಯನ್ನು ತರಲಾಗಿದೆ.
ಪ್ರತಿ ವಿಷಯದಲ್ಲೂ ಅಧ್ಯಾಯವಾರು ಅಂಕಗಳ ಹಂಚಿಕೆಯನ್ನು ಆಯಾ ಅಧ್ಯಾಯಗಳಿಗೆ ಮೀಸಲಾದ ಭೋಧನಾ ಅವಧಿಯ ಆಧಾರದ ಮೇಲೆ ನಿಗದಿಪಡಿಸಲಾಗಿದೆ. ಹೀಗೆ ನಿಗದಿಪಡಿಸಿರುವ ಅಂಕಗಳು ವ್ಯತ್ಯಾಸವಾಗದಂತೆ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸಲಾಗಿದೆ.
ಪ್ರಶ್ನೆ ಪತ್ರಿಕೆಯನ್ನು ತಯಾರಿಸುವಾಗ ಪಠ್ಯಪುಸ್ತಕದಲ್ಲಿ ಮತ್ತು ಪ್ರಶ್ನೆ ಕೋಶಗಳಲ್ಲಿ (Question Bank), ಅಧ್ಯಾಯವಾರು ಕೊಟ್ಟಿರುವ ಪ್ರಶ್ನೆಗಳ ಜೊತೆಗೆ ಹೊಸ ಪ್ರಶ್ನೆಗಳನ್ನು ಕೇಳಲು ಅವಕಾಶವಿದ್ದು, ಸದರಿ ಪ್ರಶ್ನೆಗಳ ಪರಿಕಲ್ಪನೆ (concept) ಪಠ್ಯದಲ್ಲಿರುವಂತೆ ಎಚ್ಚರ ವಹಿಸುವುದು. ಯಾವುದೇ ಕಾರಣಕ್ಕೂ ಪ್ರಶ್ನೆಗಳನ್ನು ಪಠ್ಯಕ್ರಮದಿಂದ ಹೊರತಾಗಿ (out of syllabus) ರಚಿಸಬಾರದು.
ಪಠ್ಯದಲ್ಲಿರುವ ಅಕ್ಷರ-ಸಂಖ್ಯಾಯುಕ್ತ ಬೆಲೆಗಳನ್ನು (Alpha-Numerical Values) ಬದಲಾಯಿಸಿ ಪ್ರಶ್ನೆಗಳನ್ನು ರೂಪಿಸಲು ಅವಕಾಶವಿರುತ್ತದೆ.
HOTS (Higher Order Thinking Skills) ಪ್ರಶ್ನೆಗಳನ್ನು ಪಠ್ಯಕ್ರಮದಲ್ಲಿರುವ ಯಾವ ಅಧ್ಯಾಯದಲ್ಲಿಯಾದರೂ ಆಯ್ಕೆ ಮಾಡಿಕೊಂಡು, ಪ್ರಶ್ನೆಪತ್ರಿಕೆಯ ಯಾವುದೇ ವಿಭಾಗದಲ್ಲಿ ಕೇಳಲು ಅವಕಾಶವಿರುತ್ತದೆ ಎಂದು ಹೇಳಿದೆ.
ದ್ವಿತೀಯ ಪಿಯುಸಿ ಪರೀಕ್ಷೆ-2025ರ ಮಾದರಿ ಪ್ರಶ್ನೆ ಪತ್ರಿಕೆ ಈ ರೀತಿ ಡೌನ್ ಲೋಡ್ ಮಾಡಿಕೊಳ್ಳಿ
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧಿಕೃತ ವೆಬ್ ಸೈಟ್ https://dpue-exam.karnataka.gov.in/ ಗೆ ಭೇಟಿ ನೀಡುವುದು.
ಇಲ್ಲದೇ https://dpue-exam.karnataka.gov.in/ModelQp2025/frmkmpdamodelpapers ಲಿಂಕ್ ಕ್ಲಿಕ್ ಮಾಡಿ ನೇರವಾಗಿ ಮಾದರಿ ಪ್ರಶ್ನೆ ಪತ್ರಿಕೆಗಳು ಸಿಗುವಂತ ಜಾಲತಾಣಕ್ಕೆ ಭೇಟಿ ನೀಡಬಹುದು.
ಈ ಮೇಲಿನ ಲಿಂಕ್ ನಲ್ಲಿ ನಿಮ್ಮ ವಿಷಯವಾರು ಮಾದರಿ ಪ್ರಶ್ನೆ ಪತ್ರಿಕೆಗಳ್ನು ಡೌನ್ ಲೋಡ್ ಮಾಡಿಕೊಳ್ಳಿ.