ಬೆಂಗಳೂರು : 10 ವರ್ಷ ನಿರಂತರವಾಗಿ ಕೆಲಸ ಮಾಡಿದ ಉದ್ಯೋಗಿ ಸೇವೆ ಕಾಯಂಗೆ ಅರ್ಹನಾಗುತ್ತಾನೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಹೌದು, ದಿನಗೂಲಿ ಆಧಾರದಲ್ಲಿ ಸತತ 30 ವರ್ಷ ಅರಣ್ಯ ವೀಕ್ಷಕ/ಚಾಲಕ ಉದ್ಯೋಗದಲ್ಲಿ ಕಾರ್ಯನಿರ್ವಹಿಸಿದ ದಿನಗೂಲಿ ನೌಕರನ ಸೇವೆ ಕಾಯಂಗೊಳಿಸಲು ರಾಜ್ಯ ಸರ್ಕಾರ ಮತ್ತು ಅರಣ್ಯ ಇಲಾಖೆಗೆ ಆದೇಶ ಮಾಡಿರುವ ಹೈಕೋರ್ಟ್, ಮಂಜೂರಾತಿ ಹುದ್ದೆಯಲ್ಲಿ 10 ವರ್ಷ ನಿರಂತರವಾಗಿ ಕೆಲಸ ಮಾಡಿದ ಉದ್ಯೋಗಿ ಸೇವೆ ಕಾಯಂಗೆ ಅರ್ಹನಾಗುತ್ತಾನೆ ಎಂದು ಸ್ಪಷ್ಟಪಡಿಸಿದೆ.
ತಮ್ಮ ಸೇವೆ ಕಾಯಂಗೊಳಿಸಲು ನಿರಾಕರಿಸಿ ಅರಣ್ಯ ಇಲಾಖೆ ನೀಡಿದ್ದ ಹಿಂಬರಹ ಮತ್ತು ಹಿಂಬರಹ ಪುರಸ್ಕರಿಸಿದ ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣದ(ಕೆಎಟಿ)ಆದೇಶರದ್ದುಪಡಿಸುವಂತೆ ಕೋರಿ ಆನೇಕಲ್ ವಲಯದಲ್ಲಿ ಅರಣ್ಯ ವೀಕ್ಷಕ (ಫಾರೆಸ್ಟ್ ವಾಚರ್) ಪಿ.ಜುಂಜಪ್ಪ (53) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಮತ್ತು ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದಾರ್ ಅವರ ಪೀಠ ಈ ಆದೇಶ ಮಾಡಿದೆ.
ದಿನಗೂಲಿ ನೌಕರನಾಗಿರುವ ಜುಂಜಪ್ಪ ಅವರು ಕಾಯಂ ಉದ್ಯೋಗಿಗೆ ಸರಿಸಮಾನವಾಗಿ 30 ವರ್ಷ ನಿರಂತರವಾಗಿ ಅರಣ್ಯ ವೀಕ್ಷಕ/ಚಾಲಕ ಉದ್ಯೋಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಅರಣ್ಯ ಇಲಾಖೆ ಇವರ ಸೇವೆ ಕಾಯಂಗೊಳಿಸಲು ನಿರಾಕರಿಸಿರುವ ಜೊತೆಗೆ 30 ವರ್ಷ ಆತ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿಲ್ಲ. ಜುಂಜಪ್ಪ ಅವರ ವೇತನ, ಸೇವಾ ದಾಖಲೆಗಳು ಮತ್ತು ಅರಣ್ಯ ಇಲಾಖೆಯ ಅಧಿಕೃತ ಪತ್ರ ವ್ಯವಹಾರಗಳನ್ನು ಮೌಲ್ಯಮಾಪನ ಮಾಡುವಲ್ಲಿ ಕೆಎಟಿ ವಿಫಲವಾಗಿದೆ. ಔಪಚಾರಿಕ ನೇಮಕ ಪತ್ರವನ್ನು ಹಾಜರುಪಡಿಸಿಲ್ಲ ಎಂಬ ಏಕೈಕ ಅಂಶ ಸೇವೆ ಸಲ್ಲಿಸಿರುವ ಉದ್ಯೋಗಿಯ ಸೇವಾ ಕಾಯಮಾತಿಯ ಕಾನೂನುಬದ್ದ ಹಕ್ಕನ್ನು ನಿರಾಕರಿಸುವುದಕ್ಕೆ ಆಧಾರವಾಗುವುದಿಲ್ಲ ಎಂದು ಪೀಠ ಆದೇಶಿಸಿದೆ. ಅಂತಿಮವಾಗಿ ಕೆಎಟಿ ಆದೇಶ ರದ್ದುಪಡಿಸಿರುವ ಹೈಕೋರ್ಟ್, ಜುಂಜಪ್ಪ ಅವರನ್ನು ಸೇವೆಗೆ ಕಾಯಂಗೊಳಿಸುವಂತೆ ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆಗೆ ನಿರ್ದೇಶಿಸಿದೆ.