ನವದೆಹಲಿ : ಸಂಪುಟ ಪುನಾರಚನೆ ಬಗ್ಗೆ ನೀವು ಹೈಕಮಾಂಡ್ ಜತೆ ಮಾತನಾಡುವಿರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಏನನ್ನೂ ಮಾತನಾಡುವುದಿಲ್ಲ. ನನ್ನನ್ನು ಅವರೇನಾದರೂ ಕೇಳಿದರೆ ನನಗೆ ಏನು ಬೇಕೋ ಅದನ್ನು ಹೇಳುತ್ತೇನೆ. ಹೈಕಮಾಂಡ್ ಅವರು ನನ್ನನ್ನು ಏನು ಕೇಳುತ್ತಾರೆ, ಏನು ಕೇಳುವುದಿಲ್ಲ ಎಂದು ನನಗೆ ಗೊತ್ತಿದೆ. ಅದರ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡುವುದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ದೆಹಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹೈಕಮಾಂಡ್ ನಾಯಕರನ್ನು ಮುಖ್ಯಮಂತ್ರಿ ಭೇಟಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿ, ಅವರು ಯಾರನ್ನು ಭೇಟಿ ಮಾಡಿದ್ದಾರೋ, ಏನನ್ನು ಮಾತನಾಡಿದ್ದಾರೋ ನನಗೆ ತಿಳಿದಿಲ್ಲ. ನನಗೆ ಏನೂ ತಿಳಿದಿಲ್ಲ. ಏನಾದರೂ ಮಾಹಿತಿ ಬೇಕೆಂದರೆ ಮುಖ್ಯಮಂತ್ರಿಗಳ ಬಳಿ ಮಾತನಾಡಿ. ಮುಖ್ಯಮಂತ್ರಿಯೊಬ್ಬರು ಭೇಟಿಗೆ ಬಂದಾಗ ಸಮಯ ನೀಡುವ ವಾಡಿಕೆ ಇದೆ ಎಂದರು.
ಮುಖ್ಯಮಂತ್ರಿಯವರು ಪ್ರಧಾನಿ ಹಾಗೂ ಹೈಕಮಾಂಡ್ ಅನ್ನು ಭೇಟಿ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಭೇಟಿಯಾಗುವುದು ತಪ್ಪೇನ್ರೀ? ನೀವು ಬೇರೆ ಪಕ್ಷದವರ ಬಳಿ ಮಾತನಾಡಿದಂತೆ ಮಾತನಾಡುತ್ತಿದ್ದೀರಿ. ಅವರು ಎಲ್ಲರನ್ನೂ ಭೇಟಿ ಮಾಡುವ ಹಕ್ಕು ಹೊಂದಿದ್ದಾರೆ. ಪ್ರಧಾನ ಮಂತ್ರಿ, ಗೃಹಸಚಿವರು, ನಿಮ್ಮನ್ನು, ನಮ್ಮ ಪಕ್ಷದ ಅಧ್ಯಕ್ಷರನ್ನು ಭೇಟಿ ಮಾಡಬಹುದು ಎಂದರು.








