ಬೆಂಗಳೂರು : ಕ್ರಿಮಿನಲ್ ಹಿನ್ನೆಲೆ ಉಳ್ಳವರು ಆಗಿದ್ದರೆ ಅಥವಾ ಕ್ರಿಮಿನಲ್ ಅಪರಾಧ ಆರೋಪವನ್ನು ಹೊತ್ತಿರುವವರು ಸರ್ಕಾರಿ ನೌಕರಿಗೆ ಅಡ್ಡಿಯಾದರೆ, ಸರ್ಕಾರಿ ಸೇವೆಯಿಂದ ತೆಗೆಯಲು ಅಡ್ಡಿ ಇಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಬೆಂಗಳೂರು ನಗರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ (ಎಸ್‌ಡಿಎ) ಸೇವೆ ಸಲ್ಲಿಸಿ, ಶಿಕ್ಷೆಗೊಳಗಾಗಿದ್ದ ನಂಜೇಗೌಡ ಎಂಬವರನ್ನು ಸೇವೆಯಿಂದ ವಜಾಗೊಳಿಸಿರುವ ಸರ್ಕಾರದ ಕ್ರಮವನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಮತ್ತು ನ್ಯಾಯಮೂರ್ತಿ ರಾಮಚಂದ್ರ ಹುದ್ದಾರ್ ಅವರಿದ್ದ ವಿಭಾಗೀಯ ಪೀಠ ಎತ್ತಿ ಹಿಡಿದಿದೆ.
ಪ್ರಕರಣದ ಹಿನ್ನೆಲೆ?
ಅರ್ಜಿದಾರ ನಂಜೇಗೌಡ ಅವರು ಬೆಂಗಳೂರು ನಗರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರ ಕಚೇರಿಯಲ್ಲಿ ಎಸ್‌ಡಿಎ ಆಗಿ ಸೇವೆ ಸಲ್ಲಿಸುತ್ತಿದ್ದಾಗ 2001ರಲ್ಲಿ ಹಲ್ಲೆ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದರು. ಪ್ರಕರಣ ಸಂಬಂಧ 2011ರಲ್ಲಿ ಮಾಗಡಿಯ ವಿಚಾರಣಾ ನ್ಯಾಯಾಲಯ ಆರೋಪಿಗೆ ಎರಡು ವರ್ಷಗಳ ಕಾಲ ಶಿಕ್ಷೆ ವಿಧಿಸಿತ್ತು. ಈ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು.
ಈ ಆದೇಶದ ಅನ್ವಯ 2023ರ ನವೆಂಬರ್ 18ರಂದು ಅವರನ್ನು ಸೇವೆಯಿಂದ ಸರ್ಕಾರ ವಜಾಗೊಳಿಸಿ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿದ್ದ ಅರ್ಜಿಯನ್ನು 2024ರ ಅಕ್ಟೋಬರ್ 25ರಂದು ಕರ್ನಾಟಕ ಆಡಳಿತ ಮಂಡಳಿ ವಜಾಗೊಳಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ನಂಜೇಗೌಡ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.ಇದೀಗ ಹೈಕೋರ್ಟ್ ಗಂಭೀರ ಅಪರಾಧದ ಆರೋಪ ಹೊತ್ತವರನ್ನು ಸರ್ಕಾರಿ ನೌಕರರನ್ನಾಗಿ ಸೇವೆಯಲ್ಲಿ ಮುಂದುವರೆಸಬೇಕೆಂಬುದಾಗಿ ಬಯಸುವುದನ್ನು ಒಪ್ಪುವಂತಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.