ಹೈದ್ರಾಬಾದ್ : ಹೈದರಾಬಾದ್ ಪುಷ್ಪ 2 ಸಿನಿಮಾ ವೀಕ್ಷಣೆಯ ವೇಳೆ ಕಾಲ್ತುಳಿತದಲ್ಲಿ ಮಹಿಳೆ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ಅಲ್ಲು ಅರ್ಜುನ್ ಇಂದು ಜೈಲಿನಿಂದ ಬಿಡುಗಡೆಯಾಗಿ ತಮ್ಮ ನಿವಾಸಕ್ಕೆ ತೆರಳಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ, ಮೃತ ರೇವತಿ ಅವರ ಕುಟುಂಬಕ್ಕೆ ನನ್ನಿಂದ ಆಗುವ ಸಹಾಯ ಮಾಡುತ್ತೇನೆ.ಈ ಒಂದು ಘಟನೆ ನಡೆಯಬಾರದಿತ್ತು ಎಂದು ವಿಷಾದ ವ್ಯಕ್ತಪಡಿಸಿದರು.
ಹೈದರಾಬಾದ್ ನ ಸಂಧ್ಯಾ ಥಿಯೇಟರ್ ಬಳಿ ಪುಷ್ಪ 2 ಸಿನಿಮಾ ವೀಕ್ಷಣೆ ಸಂದರ್ಭದಲ್ಲಿ ಕಾಲ್ತುಳಿತದಲ್ಲಿ ರೇವತಿ ಎನ್ನುವ ಮಹಿಳೆ ಸಾವನ್ನಪ್ಪಿದ್ದರು. ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ಪೊಲೀಸರು ನಟ ಅಲ್ಲು ಅರ್ಜುನ್ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಯ ಬಳಿಕ ಅರೆಸ್ಟ್ ಮಾಡಿದ್ದರು.
ಬಳಿಕ ನಾಂಪಲ್ಲಿ ಕೋರ್ಟಿಗೆ ಹಾಜರು ಪಡಿಸಿದ ನಂತರ ವಿಚಾರಣೆಯ ನಂತರ ಕೋರ್ಟ್ 14 ದಿನ ನ್ಯಾಯಾಂಗ ಬಂದನ ವಿಧಿಸಿ ಆದೇಶ ಹೊರಡಿಸಿತ್ತು. ಈ ವೇಳೆ ನಟ ಅಲ್ಲು ಅರ್ಜುನ್ ತೆಲಂಗಾಣ ಹೈಕೋರ್ಟಿಗೆ ನನ್ನ ವಿರುದ್ಧ ದಾಖಲಾದ ಎಫ್ ಐ ಆರ್ ರದ್ದು ಕೋರಿ ಅರ್ಜಿ ಸಲ್ಲಿಸಿದರು. ತುರ್ತು ಅರ್ಜಿ ವಿಚಾರಣೆ ನಡೆಸಿದ ತೆಲಂಗಾಣ ಹೈಕೋರ್ಟ್ ಅಲ್ಲು ಅರ್ಜುನ್ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿತ್ತು. ಹಾಗಾಗಿ ಅವರು ನಿನ್ನೆ ರಾತ್ರಿ ಸಂಪೂರ್ಣವಾಗಿ ಜೈಲಿನಲ್ಲಿ ಕಳೆದು ಇಂದು ಬೆಳಿಗ್ಗೆ ಬಿಡುಗಡೆಯಾಗಿ ಮನೆಗೆ ತೆರಳಿದ್ದಾರೆ.








