ಬೆಂಗಳೂರು : ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಮುಕ್ತನಾಗುತ್ತೇನೆ ಅದಕ್ಕೆ ಸ್ವಲ್ಪ ಕಾಯಿರಿ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿಕೆ ನೀಡಿದ್ದಾರೆ. ಇದೀಗ ಈ ಒಂದು ಹೇಳಿಕೆ ಭಾರಿ ಸಂಚಲನ ಮೂಡಿಸಿದ್ದು ಪವರ್ ಶೇರಿಂಗ್ ಕುರಿತು ಡಿಕೆ ಶಿವಕುಮಾರ್ ಸುಳಿವು ನೀಡಿದ್ರಾ ಎನ್ನುವ ಕುತೂಹಲ ಮೂಡಿಸಿದೆ.
ಹೌದು ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು, ಡಿಸಿಸಿ ಅಧ್ಯಕ್ಷರು, ಮುಂಚೂಣಿ ಘಟಕ ಹಾಗೂ ಸೆಲ್ ವಿಭಾಗಗಳ ಅಧ್ಯಕ್ಷರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಯಾರೂ ಬೇಕಾದರೂ ಕೆಪಿಸಿಸಿ ಜವಾಬ್ದಾರಿ ತೆಗೆದುಕೊಳ್ಳಬಹುದು ಎಂದು ಹೇಳುವ ಮೂಲಕ ಪವರ್ ಶೇರ್ ಕುರಿತು ಸುಳಿವು ನೀಡಿದ್ದಾರೆ ಎನ್ನಲಾಗುತ್ತಿದೆ.
ಸಭೆಯಲ್ಲಿ ಕೆಪಿಸಿಸಿ ಪದಾಧಿಕಾರಿಯೊಬ್ಬರು ಜಿಲ್ಲಾ ಮಟ್ಟದಲ್ಲಿ ಎರಡು ಹುದ್ದೆಗಳ ಬಗ್ಗೆ ಪ್ರಸ್ತಾಪ ಮಾಡಿದರು. ಆಗ ಅಲ್ಲಿಯೇ ಇದ್ದ ಡಿಕೆಶಿ ತಕ್ಷಣವೇ, ನೋಡ್ರಪ್ಪ, ಸಮಯ, ಸಂದರ್ಭ ನೋಡಿಕೊಂಡು ನಮ್ ಪಾರ್ಟಿಯಲ್ಲಿ ಹಂಗೆ ಆಗುತ್ತೆ. ಖರ್ಗೆ ಸಾಹೇಬ್ರು ಎಐಸಿಸಿ ಅಧ್ಯಕ್ಷರು, ರಾಜ್ಯಸಭೆ ವಿರೋಧ ಪಕ್ಷದ ನಾಯಕರಾಗಿದ್ದಾರೆ. ನಾನು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ, ಎರಡು ಖಾತೆ ಕೂಡ ನಿರ್ವಹಿಸ್ತಿದ್ದೇನೆ ಎಂದು ತಿಳಿಸಿದರು.