ಯಾದಗಿರಿ : ಸದ್ಯ ರಾಜ್ಯದಲ್ಲಿ ಮುಡಾ ಹಗರಣ ಭಾರಿ ಸದ್ದು ಮಾಡುತ್ತಿದ್ದು, ಇದರ ಮಧ್ಯ ಕಾಂಗ್ರೆಸ್ನ ಹಲವು ನಾಯಕರು ಸಿಎಂ ಕುರ್ಚಿಯ ಮೇಲೆ ಕಣ್ಣಿಟ್ಟಿದ್ದಾರೆ. ಈಗಾಗಲೇ ಹಲವರು ನನಗೂ ಸಿಎಂ ಆಗಬೇಕೆಂಬ ಆಸೆ ಇದೆ ಎಂಬ ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲೆ, ಇದೀಗ ನನಗೂ ಸಿಎಂ ಆಗುವ ಆಸೆ ಇದೆ. ಆದರೆ, ಹೈಕಮಾಂಡ್ ಹೇಳಬೇಕು, ಇಲ್ಲಿ ಕುರ್ಚಿ ಖಾಲಿ ಇರಬೇಕು ಅಂದಾಗ ಇದೆಲ್ಲ ಸಾಧ್ಯವೆಂದು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೊಸ ಬಾಂಬ್ ಸಿಡಿಸಿದರು.
ಯಾದಗಿರಿಯಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಯಾದಗಿರಿಯಲ್ಲಿ ಮಾತನಾಡಿದ ಸಚಿವ ಶರಣಬಸಪ್ಪ ದರ್ಶನಾಪುರ, ನನಗೂ ಸಿಎಂ ಆಗುವ ಆಸೆ ಇದೆ ಕಾಂಗ್ರೆಸ್ನಲ್ಲಿ 136 ಶಾಸಕರಿದ್ದಾರೆ. ಮಂತ್ರಿ, ಮುಖ್ಯಮಂತ್ರಿಯಾಗುವ ಆಸೆ ಎಲ್ಲರಿಗೂ ಇರುತ್ತದೆ. ಇದು ನಿರ್ಧಾರ ಆಗುವುದು ಹೈಕಮಾಂಡ್ನಲ್ಲಿ. ಸದ್ಯಕ್ಕೆ ಮಾತ್ರ ಕುರ್ಚಿ ಖಾಲಿ ಇಲ್ಲ ಎಂದರು.
2022ರಲ್ಲಿ ಮುಡಾದಲ್ಲಿ ಒಂದೇ ದಿನ 848 ನಿವೇಶನ ಹಂಚಲಾಗಿದೆ ಎಂದು ಎಲ್ಲ ಪತ್ರಿಕೆಗಳಲ್ಲಿ ಬಂದಿದೆ. ಆ ಅವಧಿಯಲ್ಲಿ ಅಧಿಕಾರದಲ್ಲಿ ಯಾವ ಪಕ್ಷವಿತ್ತು. ಬಿಜೆಪಿ ತಾನೇ? ಮೊದಲು ಇದಕ್ಕೆ ಉತ್ತರ ಕೊಡಲಿ.ಸಿದ್ದರಾಮಯ್ಯ ಜನಪರ ಕೆಲಸ ಮಾಡುವ ಮೂಲಕ ಸಿಎಂ ಆಗಿ ಜನಮನ ಗೆದ್ದಿದ್ದಾರೆ. ಇದೆಲ್ಲ ಕೆಲಸವಿಲ್ಲದ ಬಿಜೆಪಿಯವರು ಹುಟ್ಟಿಸುತ್ತಿರುವ ಒಣ ಚರ್ಚೆ ಎಂದು ಕಿಡಿ ಕಾರಿದರು.