ಬೆಳಗಾವಿ : ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ, ವಾಗ್ದಾಳಿ ನಡೆಸುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಎಂದು ಬಿಜೆಪಿಯ ಕೆಲ ಮಾಜಿ ಶಾಸಕರು ಆಗ್ರಹಿಸಿದ್ದಾರೆ. ಈ ಒಂದು ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನನ್ನ ವಿರುದ್ಧ ಉಗ್ರ ಕ್ರಮ ಕೈಗೊಂಡರು ಯಾವುದೇ ತಕರಾರು ಇಲ್ಲ ಎಂದು ತಿರುಗೇಟು ನೀಡಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಯತ್ನಾಳ್ ಅವರನ್ನು ಉಚ್ಚಾಟನೆ ಮಾಡಬೇಕು ಎನ್ನುವ ವಿಚಾರವಾಗಿ ಉಗ್ರ ಕ್ರಮ ಕೈಗೊಳ್ಳುವುದಕ್ಕೆ ನನ್ನದೇನು ತಕರಾರು ಇಲ್ಲ. ಬೇಕಾದುದ್ದನ್ನು ಮಾಡಲಿ ನಾನು ಅದನ್ನು ಸ್ವಾಗತ ಮಾಡುತ್ತೇನೆ. ನಾವು ಯಡಿಯೂರಪ್ಪನವರ ಭ್ರಷ್ಟಾಚಾರದ ಬಗ್ಗೆ ಮಾತನಾಡಿಲ್ಲ. ಯಡಿಯೂರಪ್ಪನವರ ಪೋಕ್ಸೋ ಬಗ್ಗೆ ಮಾತನಾಡಿಲ್ಲ. ನಮ್ಮ ವಕ್ಫ್ ಹೋರಾಟಕ್ಕೆ ದೆಹಲಿಯಿಂದ ತಡೆ ಹಿಡಿದಿಲ್ಲ. ಇದರ ಅರ್ಥ ನಮಗೆ ಅವರ ಆಶೀರ್ವಾದ ಇದೆ ಅಂತ ಅಂದುಕೊಳ್ಳುತ್ತೇವೆ ಯಾರ ಬಗ್ಗೆ ಮಾತನಾಡಬೇಡಿ ಎಂದು ನಮಗೆ ಹೇಳಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ತಿಳಿಸಿದರು.
ಯಡಿಯೂರಪ್ಪ ದೆಹಲಿಯಲ್ಲಿ ನನ್ನ ವಿರುದ್ಧ ದೂರು ಕೊಟ್ಟಿದ್ದಾರಾ ಅಥವಾ ನನ್ನ ಹೋರಾಟದ ಪರವಾಗಿ ಹೇಳಿದ್ದಾರೋ ಗೊತ್ತಿಲ್ಲ. ಆದರೆ ಯಾರ ಕುಟುಂಬದ ವಿರುದ್ಧವು ನನ್ನ ಹೋರಾಟ ಇಲ್ಲ. ವಕ್ಫ್ ವಿರುದ್ಧ ಹೋರಾಟಕ್ಕೆ ಬಿಜೆಪಿಯಿಂದಲೆ ಕೆಲವರು ವಿರೋಧ ವ್ಯಕ್ತಪಡಿಸಿದ ವಿಚಾರವಾಗಿ ಯಾರು ಒಳ ಒಪ್ಪಂದ ಮಾಡಿಕೊಂಡಿದ್ದಾರೆ ನೀವು ತಿಳಿದುಕೊಳ್ಳಿ ಎಂದು ಬಿವೈ ವಿಜಯೇಂದ್ರ ವಿರುದ್ಧ ಯತ್ನಾಳ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ನಮ್ಮದಂತೂ ಕಾಂಗ್ರೆಸ್ ಜೊತೆಗೆ ಯಾವುದೇ ಒಪ್ಪಂದ ಇಲ್ಲ. ಕೆಲವರು ಕಾಂಗ್ರೆಸ್ ಜೊತೆಗೆ ಒಪ್ಪಂದ ಇದೆ ಅಂತ ಆರೋಪಿಸುತ್ತಾರೆ. ಈ ಹೋರಾಟಕ್ಕೂ ವಿರೋಧ ಮಾಡ್ತಾರೆ ಅಂದರೆ ಏನು ಅರ್ಥ? ನನ್ನ ವಿರುದ್ಧ ಟೀಕೆ ಮಾಡುವವರದ್ದು ಒಳ ಒಪ್ಪಂದ ಇರಬಹುದು. ವಯಕ್ತಿಕವಾಗಿ ಯಡಿಯೂರಪ್ಪ ಭ್ರಷ್ಟಾಚಾರದ ಬಗ್ಗೆ ಮಾತನಾಡಿಲ್ಲ. ಅವರ ವಿರುದ್ಧದ ಫೋಕ್ಸೋ ಪ್ರಕರಣದ ಕುರಿತು ಮಾತನಾಡಿಲ್ಲ ಎಂದು ಇದೆ ವೇಳೆ ತಿಳಿಸಿದರು.
ಬಿವೈ ವಿಜಯೇಂದ್ರ ಬಗ್ಗೆಯೂ ಮಾತನಾಡುತ್ತಿಲ್ಲ ಪಾಪ ಅವರು ನನ್ನ ಬಗ್ಗೆ ತಪ್ಪು ತಿಳಿದುಕೊಂಡಿದ್ದಾರೆ. ಮೊನ್ನೆ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಅವರೇ ಹೇಳಿದ್ದಾರೆ.ಹೋರಾಟ ಮಾಡುತ್ತಿರುವವರು ರೆಬೆಲ್ ಟೀಮ್ ಎನ್ನುವ ವಿಚಾರವಾಗಿ ನಾವು ನಿಷ್ಠಾವಂತ ಬಿಜೆಪಿ ಕಾರ್ಯಕರ್ತರು. ‘ನಿಭಾಜಪ’ ಅಂತ ನಾವು ಹೆಸರಿಟ್ಟಿದ್ದೇವೆ ಎಂದರು.