ಧಾರವಾಡ : ಈಗಾಗಲೇ ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತೀವ್ರ ಸಂಕಷ್ಟ ಎದುರಾಗಿದ್ದು ಇದರ ಬೆನ್ನಲ್ಲೇ ಕೆಲವು ಕಾಂಗ್ರೆಸ್ ನಾಯಕರು ಸಿಎಂ ಕುರ್ಚಿಯ ಮೇಲೆ ಟವಲ್ ಹಾಕಿದ್ದಾರೆ. ಇದರ ಮಧ್ಯ ಇಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ನಾನೊಬ್ಬ ಮುಖ್ಯಮಂತ್ರಿ ಅಂತ ಇಲ್ಲಿ ಬಂದಿಲ್ಲವೆಂದು ಹೇಳುವ ಮೂಲಕ ಬಹಿರಂಗವಾಗಿಯೇ ಮುಖ್ಯಮಂತ್ರಿಯಾಗುವ ಆಸೆ ಬಿಚ್ಚಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಹೌದು ಇಂದು ಧಾರವಾಡದ ರಡ್ಡಿ ಬ್ಯಾಂಕ್ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡುವ ಭರದಲ್ಲಿ ಅವರು, ನಾನೊಬ್ಬ ಸಿಎಂ ಆಗಿ ಇಲ್ಲಿ ಬಂದಿಲ್ಲ ಎಂದು ಬಾಯಿ ತಪ್ಪಿ ತಾನೇ ಸಿಎಂ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು. ಆ ಮೂಲಕ ಬಹಿರಂಗವಾಗಿ ನೆಕ್ಸ್ಟ್ ಸಿಎಂ ನಾನೇ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ ಎನ್ನಲಾಗುತ್ತಿದೆ.
ಸಮಾರಂಭದಲ್ಲಿ ಮುಂದುವರೆದು ಮಾತನಾಡುತ್ತ, ನಾನು ಕೂಡ ಸಹಕಾರ ಕ್ಷೇತ್ರದವನಾಗಿ ಬಂದಿದ್ದೇನೆ. ನಾನು ಕೂಡ ಸೊಸೈಟಿ ಎಲೆಕ್ಷನ್ ನಿಂದ ರಾಜಕೀಯಕ್ಕೆ ಬಂದವನು. ಹೀಗೆ ಕಾರ್ಯಕ್ರಮದಲ್ಲಿ ತಮ್ಮ ಮೊದಲ ಚುನಾವಣೆ ಅನುಭವ ಹೇಳುತ್ತಾ ಸಿಎಂ ಆಗುವ ಮನದಾಳದ ಮಾತನ್ನು ಡಿಕೆ ಶಿವಕುಮಾರ್ ಬಿಚ್ಚಿಟ್ಟಿದ್ದಾರೆ ಎನ್ನಲಾಗುತ್ತಿದೆ.