ಬೆಂಗಳೂರು : ರಾಜ್ಯದ ಪ್ರತಿಷ್ಠಿತ KMF ನ ನಂದಿನಿ ಬ್ರಾಂಡ್ ರಾಷ್ಟ್ರಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಇದಿಗ ಒಂದು ಹೆಜ್ಜೆ ಮುಂದೆ ಹೋಗಿ ಕೆಎಂಎಫ್ ನಂದಿನಿ ಬ್ರಾಂಡ್ ನ ಇಡ್ಲಿ, ದೋಸೆ ಹಿಟ್ಟು ಮಾರಾಟ ಮಾಡುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ.
ಹೌದು ಕೆಎಂಎಫ್ನ ನಂದಿನಿ ಬ್ರ್ಯಾಂಡ್‌ನ ಇಡ್ಲಿ ಮತ್ತು ದೋಸೆ ಹಿಟ್ಟು ಮಾರಾಟ ಬೆಂಗಳೂರಿನಲ್ಲಿ ಭಾರಿ ಯಶಸ್ಸು ಕಂಡಿದೆ. ಮೂರು ದಿನಗಳಲ್ಲಿ 2250 ಮೆಟ್ರಿಕ್ ಟನ್‌ಗಳಷ್ಟು ಮಾರಾಟವಾಗಿದೆ. ಈ ಯಶಸ್ಸಿನಿಂದಾಗಿ, ಕೆಎಂಎಫ್ ರಾಜ್ಯದ ಇತರ ಜಿಲ್ಲೆಗಳಿಗೂ ಶೀಘ್ರದಲ್ಲಿ ಈ ಹಿಟ್ಟನ್ನು ವಿತರಿಸಲು ಯೋಜಿಸಿದೆ. ಒಂದು ವಾರದೊಳಗೆ ಇತರ ಜಿಲ್ಲೆಗಳನ್ನೂ ಮಾರಾಟ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಸದ್ಯಕ್ಕೆ ಕೆಎಂಎಫ್ ಬೆಂಗಳೂರಿನಲ್ಲಿ ಮಾತ್ರ ಪ್ರಾಯೋಕವಾಗಿ ನಂದಿನಿ ಬ್ರಾಂಡ್ ನ ಇಡ್ಲಿ ದೋಸೆ ಹಿಟ್ಟು ಮಾರಾಟ ಮಾಡುತ್ತಿದ್ದು ಇದರಿಂದ ಬೆಂಗಳೂರಿನಲ್ಲಿ ಉತ್ತಮ ಸ್ಪಂದನೆ ದೊರಕಿದ್ದರಿಂದ ಮುಂದಿನ ದಿನಗಳಲ್ಲಿ ರಾಜ್ಯದ ಇತರೆ ಜಿಲ್ಲೆಗಳಲ್ಲೂ ಕೂಡ ನಂದಿನಿ ಇಡ್ಲಿ, ದೋಸೆ ಹಿಟ್ಟು ಪೂರೈಸುವ ಪ್ಲಾನ್ ಮಾಡಿದೆ.ಇತ್ತ ನಂದಿನಿ ಪರಿಚಯಿಸಿರುವ ದೋಸೆ ಹಿಟ್ಟಿನಲ್ಲಿ ವೇ ಪ್ರೊಟೀನ್ ಕೂಡ ಇರುವುದರಿಂದ ಸದ್ಯ ಜಿಮ್, ಡಯಟ್ ಬಗ್ಗೆ ಗಮನಹರಿಸುವವರು ಕೂಡ ನಂದಿನಿ ಹಿಟ್ಟಿನ ಮೊರೆಹೋಗುತ್ತಿದ್ದಾರೆ.
ಸದ್ಯ ಬೆಂಗಳೂರಲ್ಲಿ 450 ಗ್ರಾಂ ಪ್ಯಾಕ್ ದೋಸೆ ಹಿಟ್ಟಿಗೆ 40 ರೂಪಾಯಿ ಹಾಗೂ 900 ಗ್ರಾಂಗೆ 80 ರೂಪಾಯಿ ದರ ನಿಗದಿಪಡಿಸಿರುವ ಕೆಎಂಎಫ್, ಇದೇ ಪ್ರಥಮಬಾರಿಗೆ ದೋಸೆ ಹಿಟ್ಟಿಗೆ ಶೇಕಡ 5 ರಷ್ಟು ವೇ ಪ್ರೊಟೀನ್ ಸೇರಿಸಿ ಜನರಿಗೆ ನೀಡುತ್ತಿದೆ. ಇದರಿಂದಾಗಿ ಮತ್ತಷ್ಟು ಜನಪ್ರಿಯತೆ ಗಳಿಸಿದೆ.ಮುಂದಿನ ಒಂದು ವಾರದೊಳಗಾಗಿ ಇತರೆ ಜಿಲ್ಲೆಗಳಲ್ಲೂ ದೋಸೆ, ಇಡ್ಲಿ ಹಿಟ್ಟು ಮಾರಾಟ ಆರಂಭಿಸುವುದಾಗಿ ಕೆಎಂಎಫ್ ಸುಳಿವು ನೀಡಿದೆ. ಈ ಬಗ್ಗೆ ಕೆಎಂಎಫ್ ಎಂಡಿ ಶಿವಸ್ವಾಮಿ ಮಾಹಿತಿ ನೀಡಿದ್ದಾರೆ.