ಬೆಂಗಳೂರು : ರಾಜ್ಯದಲ್ಲಿ ಸದ್ಯ ಹಾನಿಟ್ರ್ಯಾಪ್ ಪ್ರಕರಣ ಭಾರಿ ಸದ್ದು ಮಾಡುತ್ತಿದ್ದು, ಸಹಕಾರ ಸಚಿವ ಕೆ.ಎನ್ ರಾಜಣ್ಣ ಅವರ ಮೇಲೆ ಹನಿಟ್ರ್ಯಾಪ್ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಿ ಆದೇಶ ಹೊರಡಿಸಿತ್ತು. ಇದೀಗ ಸಿಐಡಿ ಅಧಿಕಾರಿಗಳು ಇಂದು ಸಚಿವ ರಾಜಣ್ಣ ಅವರನ್ನು ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಹೌದು ಯುಗಾದಿ ಹಾಗೂ ರಂಜಾನ್ ಹಬ್ಬಗಳ ರಜೆ ಹಿನ್ನೆಲೆಯಲ್ಲಿ ತುಸು ವಿರಾಮ ಕೊಟ್ಟಿದ್ದ ಸಿಐಡಿ ಅಧಿಕಾರಿಗಳು, ಇಂದಿನಿಂದ ಸಹಕಾರ ಸಚಿವ ರಾಜಣ್ಣ ಅವರ ಹನಿಟ್ರ್ಯಾಪ್ ಯತ್ನ ಪ್ರಕರಣದ ವಿಚಾರಣೆಗೆ ಮತ್ತೆ ಚುರುಕು ನೀಡಲಿದ್ದಾರೆ. ಈ ಪ್ರಕರಣದ ಬಗ್ಗೆ ಮಾಹಿತಿ ಪಡೆಯಲು ಸಚಿವರನ್ನು ಮಂಗಳವಾರ ಅಥವಾ ಬುಧವಾರ ವಿಚಾರಣೆಗೊಳಪಡಿಸಲು ಯೋಜಿಸಿದ್ದಾರೆ.
ಸಚಿವರಿಂದ ಹೇಳಿಕೆ ಪಡೆಯಲು ಸಿಐಡಿ ಅಧಿಕಾರಿಗಳು ಮುಂದಾಗಿದ್ದರು. ಆದರೆ, ಹಬ್ಬದ ಕಾರಣಕ್ಕಾಗಿ ಸಚಿವರು ಕಾಲಾವಕಾಶ ಕೋರಿದ್ದರು. ಹೀಗಾಗಿ, ದೂರುದಾರರಾಗಿರುವ ಸಚಿವರ ಹೇಳಿಕೆ ಇಲ್ಲದೆ ವಿಚಾರಣೆ ಮುಂದುವರಿಸಲು ತಾಂತ್ರಿಕ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸಚಿವರಿಂದ ಘಟನೆ ಕುರಿತು ವಿವರಣೆ ಪಡೆದು, ಬಳಿಕ ಮುಂದಿನ ಹಂತದ ಕಾನೂನು ಕ್ರಮದ ಬಗ್ಗೆ ಅಧಿಕಾರಿಗಳು ನಿರ್ಧರಿಸಲಿದ್ದಾರೆ.
ಪ್ರಕರಣ ಸಂಬಂಧ ಈಗಾಗಲೇ ಬೆಂಗಳೂರಿನ ಸಚಿವರ ಸರ್ಕಾರಿ ಅಧಿಕೃತ ನಿವಾಸ, ಮಧುಗಿರಿ ಪಟ್ಟಣದ ಅವರ ಕ್ಷೇತ್ರದಗೃಹಕಚೇರಿಹಾಗೂ ತುಮಕೂರಿನ ಕ್ಯಾತಸಂದ್ರದಲ್ಲಿರುವ ಖಾಸಗಿ ನಿವಾಸಗಳಿಗೆ ಭೇಟಿ ನೀಡಿ, ಪ್ರಾಥಮಿಕ ಹಂತದ ಪರಿಶೀಲನೆ ನಡೆಸಿ, ಸಿಐಡಿ ತಂಡಗಳು ಮಾಹಿತಿ ಕಲೆ ಹಾಕಿವೆ.