ಬೆಂಗಳೂರು : ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಸಹಕಾರ ಸಚಿವ ಕೆ ಎನ್ ರಾಜಣ್ಣ ಬೆಂಗಳೂರಿನ ಸದಾಶಿವನಗರದಲ್ಲಿರುವ ಗೃಹ ಸಚಿವ ಜಿ ಪರಮೇಶ್ವರ್ ಅವರ ಮನೆಗೆ ಭೇಟಿ ನೀಡಿ ದೂರು ನೀಡಿದ್ದಾರೆ. ಬಳಿಕ ಗೃಹ ಸಚಿವ ಜಿ.ಪರಮೇಶ್ವರ್ ಹಾಗೂ ಕೆ.ಎನ್ ರಾಜಣ್ಣ ಜಂಟಿ ಸುದ್ದಿಗೋಷ್ಠಿ ನಡೆಸಿ ಪ್ರಕರಣದ ಕುರಿತು ಸಿಎಂ ಸಿದ್ದರಾಮಯ್ಯ ಹಾಗೂ ಕಾನೂನು ತಜ್ಞರ ಜೊತೆ ಚರ್ಚಿಸಿ ತೀರ್ಮಾನಿಸಲಾಗುತ್ತದೆ ಎಂದು ಪರಮೇಶ್ವರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉನ್ನತ ಮಟ್ಟದ ತನಿಖೆ ಮಾಡಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಾನು ಹೇಳಿದ್ದೆ. ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದ ಬಳಿಕ ಕೆ.ಎನ್ ರಾಜಣ್ಣ ಬ್ಯುಸಿಯಾಗಿದ್ದರು. ಈಗ ಬಂದು ಹನಿಟ್ರ್ಯಾಪ್ ಯತ್ನ ಕೇಸ್ ಸಂಬಂಧ ಮನವಿ ಸಲ್ಲಿಸಿದ್ದಾರೆ. ಸಿಎಂ ಜೊತೆಗೆ ಚರ್ಚಿಸಿ ಏನು ಕ್ರಮ ಕೈಗೊಳ್ಳಬೇಕೆಂದು ನಿರ್ಧರಿಸುತ್ತೇವೆ ಎಂದು ಪರಮೇಶ್ವರ್ ತಿಳಿಸಿದರು.
ಪ್ರಕರಣ ಸಂಬಂಧ ನನಗೆ ದೂರು ಕೊಡಲು ಆಗಲ್ಲ. ರಾಜಣ್ಣ ಕೇವಲ ಮನವಿ ಮಾತ್ರ ಸಲ್ಲಿಸಿದ್ದಾರೆ. ಯಾವುದೇ ದೂರನ್ನು ಆಗಲಿ ಪೊಲೀಸರಿಗೆ ನೀಡಬೇಕು. ಸಿಎಂ ಸಿದ್ದರಾಮಯ್ಯ ಕಾನೂನು ತಜ್ಞರ ಜೊತೆ ಚರ್ಚಿಸಿ ತನಿಖೆಯ ಬಗ್ಗೆ ತೀರ್ಮಾನಿಸಲಾಗುತ್ತದೆ. ಯಾರಿಂದ ಹೇಗೆ ತನಿಖೆ ನಡೆಸಬೇಕು ಎಂಬುವುದರ ಕುರಿತು ನಿರ್ಧಾರ ಕೈಗೊಳ್ಳುತ್ತೇವೆ ಎಂದು ಪರಮೇಶ್ವರ್ ಸುದ್ದಿಗೋಷ್ಠಿ ಬಳಿಕ ಹೇಳಿದರು.
ನಂತರ ಮಾತನಾಡಿದ ಸಚಿವ ಕೆ.ಎನ್ ರಾಜಣ್ಣ ಜಡ್ಜ್ ಗಳಿಗೆ ಹನಿಟ್ಯಾಪ್ ಯತ್ನ ಆಗಿದೆ ಎಂದು ನಾನು ಹೇಳಿಲ್ಲ. ಎಲ್ಲಾ ಪಕ್ಷದವರಿಗೆ ಹನಿಟ್ರ್ಯಾಪ್ ಆಗಿದೆ.ಕೆಲವರು ಕೋರ್ಟ್ ನಿಂದ ಸ್ಟೇ ತಂದಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಈ ಚಾಳಿ ಮುಂದುವರಿಯಬಾರದು. ಮಾಧ್ಯಮಗಳಲ್ಲಿ ತುಮಕೂರಿನ ಪ್ರಭಾವಿ ಸಚಿವರು ಅಂತ ತೋರಿಸುತ್ತಿದ್ದರು. ವಿಧಾನಸಭೆಯಲ್ಲಿ ಹನಿಟ್ರ್ಯಾಪ್ ಬಗ್ಗೆ ಸುನಿಲ್ ಪ್ರಸ್ತಾಪ ಮಾಡಿದ್ದರು. ಮಾರನೇ ದಿನ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನನ್ನ ಹೆಸರು ಹೇಳಿದರು ಎಂದು ತಿಳಿಸಿದರು.