ಬೆಂಗಳೂರು : ಅಪ್ರಾಪ್ತೆಗೆ ಬೆದರಿಕೆ ಹಾಕಿ ಅತ್ಯಾಚಾರವೆಸಗಿ ಗರ್ಭಿಣಿಯನ್ನಾಗಿಸಿದ್ದ ಅಪರಾಧಿಗೆ ಪೋಕ್ಸೊ ವಿಶೇಷ ನ್ಯಾಯಾಲಯ ವಿಧಿಸಿದ್ದ 10 ವರ್ಷಗಳ ಶಿಕ್ಷೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲ್ಮನವಿದಾರ ಸಂತ್ರಸ್ತೆಗೆ ಅತ್ಯಾಚಾರವೆಸಗಿರುವ ಆರೋಪ ಸಂಬಂಧ ಸಾಕ್ಷ್ಯಾಧಾರಗಳು ಸಾಬೀತುಪಡಿಸಿವೆ.
ಅಲ್ಲದೆ, ಪ್ರಕರಣ ಸಂಬಂಧ ತನಿಖಾಧಿಕಾರಿಗಳು ಸಲ್ಲಿಸಿರುವ ಸಾಕ್ಷ್ಯಾಧಾರಗಳು ಪರಿಶೀಲಿಸಿದರೆ ಸಂತ್ರಸ್ತೆಯು ಅಪ್ರಾಪ್ತೆಯಾಗಿದ್ದಾರೆ ಎಂಬ ಅಂಶ ಗೊತ್ತಾಗಲಿದೆ. ಜತೆಗೆ, ಸಂತ್ರಸ್ತೆ ನೀಡಿರುವ ಹೇಳಿಕೆಗಳು ವಿಶ್ವಾಸಾರ್ಹ ಮತ್ತು ನಂಬಲಾರ್ಹವಾಗಿದೆ. ಪ್ರಕರಣ ಸಂಬಂಧ ಶಿಕ್ಷೆಗೆ ಗುರಿಯಾಗಿರುವ ಆರೋಪಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ. ಬಸವರಾಜು ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಪ್ರಕರಣದ ಹಿನ್ನೆಲೆ?
ಕೋಲಾರ ಮೂಲದ 8ನೇ ತರಗತಿ ಅಧ್ಯಯನ ಮಾಡುತ್ತಿದ್ದ ಸುಮಾರು 13 ವರ್ಷದ ವಯಸ್ಸಿನ ಬಾಲಕಿ ಶಾಲೆಗೆ ಹೋಗುವ ಸಂದರ್ಭದಲ್ಲಿ ಅಪರಾಧಿ ಹಿಂಬಾಲಿಸಿಕೊಂಡು ಅವಳೊಂದಿಗೆ ಮಾತನಾಡುವುದಕ್ಕೆ ಮುಂದಾಗುತ್ತಿದ್ದ. ಒಮ್ಮೆ ಶಾಲೆಯಿಂದ ಮನೆಗೆ ಹಿಂದಿರುಗುವಾಗ ಅಪರಾಧಿಯು ಸಂತ್ರಸ್ತೆಯ ಬಳಿ ಪ್ರೀತಿಸುತ್ತಿರುವುದಾಗಿ ಹೇಳಿ ತನ್ನೊಂದಿಗೆ ಸಹಕರಿಸದಿದ್ದಲ್ಲಿ ಸಂತ್ರಸ್ತೆ ಮತ್ತವರ ಪೋಷಕರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ.
ಇದಾದ ಬಳಿಕ ರಸ್ತೆ ಬದಿಯಲ್ಲಿದ್ದ ನೀಲಗಿರಿ ತೋಪಿಗೆ ಕರೆದೊಯ್ದು ಅವಳ ಮೇಲೆ ಅತ್ಯಾಚಾರವೆಸಗಿದ್ದು, ಕೆಲ ದಿನಗಳ ಕಾಲ ಇದೇ ರೀತಿಯ ಕೃತ್ಯವನ್ನು ಮುಂದುವರೆಸಿ, ಕೃತ್ಯದ ಬಳಿಕ ವಿಚಾರವನ್ನು ಯಾರಿಗಾದರೂ ತಿಳಿಸಿದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನು. ಘಟನೆಯಿಂದಾಗಿ ಅಪ್ರಾಪ್ತೆ ಗರ್ಭಿಣಿಯಾಗಿದ್ದರು. ಬಳಿಕ ಕೋಲಾರದ ಎಸ್ಎನ್ಆರ್ ಆಸ್ಪತ್ರೆಗೆ ಪರೀಕ್ಷೆಗೆಂದು ಕರೆದೊಯ್ದು ಸಂದರ್ಭದಲ್ಲಿ, ಅಪ್ರಾಪ್ತ ಸಂತ್ರಸ್ತೆ ಏಳು ತಿಂಗಳ ಗರ್ಭಿಣಿ ಎಂಬ ಅಂಶವನ್ನು ವೈದ್ಯರು ತಿಳಿಸಿದ್ದರು.
ದೂರಿನ ಅನ್ವಯ ತನಿಖೆ ಪ್ರಾರಂಭಿಸಿದ್ದ ಕೋಲಾರದ ಗ್ರಾಮೀಣ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿ, ಸಂತ್ರಸ್ತೆಯಿಂದ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿಕೊಂಡಿದ್ದರು.ಆರೋಪ ಪಟ್ಟಿ ಮತ್ತು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ವಿಚಾರಣಾ ನ್ಯಾಯಾಲಯ ಅರ್ಜಿದಾರ ಅಪರಾಧಿಗೆ ಪೋಕ್ಸೋ ಕಾಯಿದೆಯಡಿ 10 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂ.ಗಳ ದಂಡ ವಿಧಿಸಿತ್ತು. ಆದರೆ, ಕ್ರಿಮಿನಲ್ ಬೆದರಿಕೆ ಆರೋಪದಲ್ಲಿ ಖುಲಾಸೆಗೊಳಿಸಿ ಆದೇಶಿತ್ತು. ಇದನ್ನು ಪ್ರಶ್ನಿಸಿ ಅಪರಾಧಿ ಹೈಕೋರ್ಟ್ ಅರ್ಜಿ ಸಲ್ಲಿಸಿದ್ದರು.







