ಬೆಂಗಳೂರು : ರಾಜ್ಯದಲ್ಲಿ ಇಂದಿನಿಂದ ಮುಂದಿನ ಒಂದು ವಾರಗಳ ಕಾಲ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಬೆಂಗಳೂರು ನಗರದ ಹಲವು ಪ್ರದೇಶಗಳು ಸೇರಿದಂತೆ ಚಿಕ್ಕಮಂಗಳೂರು ನಗರದಲ್ಲಿ ಕೂಡ ಗುಡುಗು ಸಹಿತ ಭಾರಿ ಮಳೆ ಆಗುತ್ತಿದ್ದು ಭಾರಿ ಮಳೆಯಿಂದಾಗಿ ವಾಹನ ಸವಾರರು ಪರದಾಟ ನಡೆಸಿದ್ದಾರೆ.
ಹೌದು ಚಿಕ್ಕಮಂಗಳೂರು ನಗರದಾದ್ಯಂತ ಇಂದು ಗುಡುಗು ಸಹಿತ ಭಾರಿ ಮಳೆ ಆಗುತ್ತಿದ್ದು, ದಿಡೀರ್ ಮಳೆಗೆ ಚಿಕ್ಕಮಂಗಳೂರಿನಲ್ಲಿ ವಾಹನ ಸವಾರರು ಪರದಾಟ ನಡೆಸಿದರು. ಬಿರುಗಾಳಿ ಸಹಿತ ವರುಣ ಅಬ್ಬರಿಸುತ್ತಿದ್ದಾನೆ. ಅಲ್ಲದೆ ಭಾರಿ ಮಳೆಯಿಂದಾಗಿ ಕೆಲವು ಕಡೆ ಜನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ.
ಇನ್ನು ಬೆಂಗಳೂರು ಮಹಾನಗರದಲ್ಲು ಸಹ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ.ಬಿಟಿಎಂ ಲೇಔಟ್, ತಾವರೆಕೆರೆ ಮುಖ್ಯ ರಸ್ತೆಯಲ್ಲಿ ಅವಾಂತರ ಸೃಷ್ಟಿಯಾಗಿದೆ. ಮಳೆಯಿಂದ ಬಿಟಿಎಂ ಲೇಔಟಿನ ರಸ್ತೆಗಳು ಕೆರೆಯಂತೆ ಆಗಿವೆ.ರಸ್ತೆ ಜಲಾವೃತ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ.
ಇನ್ನು ಬೆಂಗಳೂರಿನ ರಾಜಾಜಿನಗರದಲ್ಲಿ ಮಳೆಯಿಂದಾಗಿ ಸ್ಕಾರ್ಪಿಯೋ, ಸ್ವಿಫ್ಟ್ ಕಾರ್ ಮತ್ತು ಬೈಕ್ ಗಳ ಮೇಲೆ ಮರ ಬಿದ್ದಿದೆ. ಬಿಬಿಎಂಪಿ ಸಿಬ್ಬಂದಿಯಿಂದ ಇದೀಗ ಮರ ತೆರವು ಕಾರ್ಯಾಚರಣೆ ನಡೆಯುತ್ತಿದೆ. ರಸ್ತೆಯಲ್ಲಿ ವಿದ್ಯುತ್ ಕಂಬಗಳು ಅಡ್ಡಲಾಗಿ ಬಿದ್ದಿದ್ದು, ವಾಹನಗಳ ಮೇಲೆ ವಿದ್ಯುತ್ ಕಂಬ ಮತ್ತು ಮರಗಳು ಬಿದ್ದಿರುವ ಘಟನೆ ವರದಿಯಾಗಿದ್ದು, ಬೆಂಗಳೂರಿನ ರಾಜಾಜಿನಗರದಲ್ಲಿ ಮಳೆ ಆರ್ಭಟದಿಂದ ಈ ಒಂದು ಅವಾಂತರಗಳು ಸೃಷ್ಟಿಯಾಗಿವೆ.