ಕೊಪ್ಪಳ : ಇಂದಿನಿಂದ ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಆರಂಭವಾಗಿವೆ. ವಿದ್ಯಾರ್ಥಿಗಳು ಅಷ್ಟೇ ಉತ್ಸಾಹದಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿದ್ದಾರೆ. ಆದರೆ ಕೊಪ್ಪಳದಲ್ಲೊಂದು ಹೃದಯವಿದ್ರ ಘಟನೆ ನಡೆದಿದ್ದು, ತಾಯಿಯ ನಿಧನದ ನೋವಿನಲ್ಲಿ ಕೂಡ ವಿದ್ಯಾರ್ಥಿ ಒಬ್ಬ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿದ್ದಾನೆ.
ಹೌದು ತಾಯಿಯ ಅಗಲಿಕೆಯ ನೋವಿನ ಮಧ್ಯೆಯೂ ವಿದ್ಯಾರ್ಥಿಯೊಬ್ಬ ಪರೀಕ್ಷೆ ಬರೆದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕೇಸರಹಟ್ಟಿಯಲ್ಲಿ ನಡೆದಿದೆ.ನೋವಿನಲ್ಲಿದ್ದ ವಿದ್ಯಾರ್ಥಿ ಅಡಿವೆಯ್ಯ ಸ್ವಾಮಿ ಮನೆಗೆ ಬಂದ ಶಿಕ್ಷಕರು ಸಾಂತ್ವಾನ ಹೇಳಿದರು. ಬಳಿಕ ಪರೀಕ್ಷಾ ಕೇಂದ್ರದವರೆಗೆ ಕರೆದೊಯ್ಯಲು ನೆರವಾದರು. ಪರೀಕ್ಷೆಯ ಬಳಿಕ ವಿದ್ಯಾರ್ಥಿ ತನ್ನ ತಾಯಿಯ ಅಂತಿಮ ಸಂಸ್ಕಾರದಲ್ಲಿ ಭಾಗಿಯಾದ.
ಗ್ರಾಮದ ಸ್ವಾಮಿ ವಿವೇಕಾನಂದ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಅಡಿವೆಯ್ಯ ಸ್ವಾಮಿ ಎಂಬ ಹತ್ತನೇ ತರಗತಿಯ ವಿದ್ಯಾರ್ಥಿಯ ತಾಯಿ ವಿಜಯಲಕ್ಷ್ಮಿ ಸಿದ್ದಯ್ಯಸ್ವಾಮಿ (38) ಶುಕ್ರವಾರ ಬೆಳಗಿನ ಸಮಯದಲ್ಲಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವಿದ್ಯಾರ್ಥಿ ತಾಯಿ ವಿಜಯಲಕ್ಷ್ಮಿ ಕಳೆದ ಕೆಲ ದಿನಗಳ ಹಿಂದೆ ಬಚ್ಚಲು ಮನೆಯಲ್ಲಿ ಬಿದ್ದು ತಲೆಗೆ ಗಾಯಮಾಡಿಕೊಂಡಿದ್ದರು.
ಪರಿಣಾಮ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಹೀಗಾಗಿ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರ ರಾತ್ರಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆದರೆ, ಶುಕ್ರವಾರ ಬೆಳಗ್ಗೆ ವಿಜಯಲಕ್ಷ್ಮಿ ಸಾವನ್ನಪ್ಪಿರುವ ವಿಚಾರ ಕುಟುಂಬದ ಮೂಲಗಳು ತಿಳಿಸಿವೆ.ತಾಯಿಯ ಅಗಲಿಕೆಯ ಸುದ್ದಿಯ ಮಧ್ಯೆಯೂ ಧೃತಿಗೆಡದ ವಿದ್ಯಾರ್ಥಿ ತನ್ನ ಕುಟುಂಬದವರ ಮನವೊಲಿಸಿ ಪರೀಕ್ಷೆ ಬರೆಯುವುದಾಗಿ ತಿಳಿಸಿದ್ದ.