ರಾಮನಗರ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗಿಫ್ಟ್ ಕೂಪನ್ಗಳನ್ನು ಹಂಚಿ ವ್ಯಾಪಕ ಅಕ್ರಮ ನಡೆಸಿತ್ತು. ಇದೀಗ ಉಪಚುನಾವಣೆಯಲ್ಲಿಯೂ ಕೂಡ ಅದೇ ರೀತಿಯ ಅಕ್ರಮ ನಡೆಸಲು ಹೊರಟಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ಚನ್ನಪಟ್ಟಣದಲ್ಲಿ ಚುನಾವಣೆ ಪ್ರಚಾರದಲ್ಲಿ ಮಾತನಾಡಿದ ಅವರು,, ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ, ಮಾಗಡಿ ಸೇರಿದಂತೆ ರಾಜ್ಯದ ಹಲವಾರು ವಿಧಾನಸಭೆ ಕ್ಷೇತ್ರಗಳಲ್ಲಿ 3 ಸಾವಿರ ರೂ. 5 ಸಾವಿರ ರೂ. ಮೌಲ್ಯದ ಗಿಫ್ಟ್ ಕೂಪನ್ ಹಂಚಲಾಯಿತು. ಚುನಾವಣೆ ಮುಗಿದ ಮೇಲೆ ಆ ಕೂಪನ್ಗಳನ್ನು ಬೆಂಗಳೂರಿನ ಲುಲು ಮಾಲ್ಗೆ ಹೋಗಿ ಕೊಡಿ, ಅಲ್ಲಿಗೆ ಹೋಗಿ ನಿಮಗೆ ಬೇಕಾದ ವಸ್ತುವನ್ನು ಖರೀದಿ ಮಾಡಿ ಎಂದು ಆಮಿಷ ಒಡ್ಡಿದ್ದರು.
ಇದನ್ನು ನಂಬಿ ಕೂಪನ್ ಹಿಡಿದುಕೊಂಡು ಲುಲು ಮಾಲ್ಗೆ ಹೋದರೆ ಅಲ್ಲಿ ಕೂಪನ್ ಇಲ್ಲ, ವಸ್ತುಗಳೂ ಇಲ್ಲ.ಕಾಂಗ್ರೆಸ್ ಪಕ್ಷವು ವಾಮಮಾರ್ಗದಲ್ಲಿ ಚುನಾವಣೆಗಳನ್ನು ಗೆಲ್ಲುವ ಚಾಳಿ ಮಾಡಿಕೊಂಡಿದೆ. ಚನ್ನಪಟ್ಟಣ ಕ್ಷೇತ್ರದಲ್ಲಿಯೂ ಕೂಪನ್ ಷಡ್ಯಂತ್ರ ಮಾಡಲು ಕಾಂಗ್ರೆಸ್ ಹೊರಟಿದೆ. ಇಂಥ ವಂಚನೆಯ ಕುತಂತ್ರಕ್ಕೆ, ಆಮಿಷಕ್ಕೆ ಯಾರೂ ಕೂಡ ಒಳಗಾಗಬೇಡಿ ಎಂದು HD ಕುಮಾರಸ್ವಾಮಿ ಜನತೆಯಲ್ಲಿ ಮನವಿ ಮಾಡಿದರು.