ಬೆಂಗಳೂರು : ವಕ್ಫ್ ಆಸ್ತಿ ಕುರಿತಂತೆ ಪ್ರಚೋದನಕಾರಿ ಭಾಷಣ ನೀಡಿದ ಆರೋಪದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಾಲಿ ಸಂಸದ ಬಸವರಾಜ ಬೊಮ್ಮಾಯಿ ವಿರುದ್ಧ ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ಎಫ್ಐಆರ್ ದಾಖಲಾಗಿತ್ತು ಇದೀಗ ಈ ಒಂದು ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿದೆ.
ಅರ್ಜಿ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರು ಯಾವುದೇ ಆಕ್ಷೇಪಾರ್ಹವಾದ ಮಾತುಗಳನ್ನು ಆಡದಿದ್ದರೂ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ’ ಎಂದು ಪೀಠಕ್ಕೆ ತಿಳಿಸಿದರು. ಈ ವೇಳೆ ನಾವು ಬೇರೊಬ್ಬರ ಪರವಾಗಿ ಮಾತನಾಡಲಾಗದು. ಬೊಮ್ಮಾಯಿ ಅವರು ಹೇಳಿಕೆ ನೀಡಿದ್ದಾರೆ ಎಂದು ಹೇಳುತ್ತಿಲ್ಲ. ಆದರೆ, ದೂರಿನಲ್ಲಿನ ಕೊನೆಯ ನಾಲ್ಕು ಸಾಲುಗಳಲ್ಲಿನ ಹೇಳಿಕೆಗಳು ಬೇಕಿರಲಿಲ್ಲ ಎಂದು ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್.ಜಗದೀಶ್ ಪೀಠಕ್ಕೆ ವಿವರಿಸಿದರು.
ಪ್ರಕರಣ ಹಿನ್ನೆಲೆ ಏನು?
ಸವಣೂರಿನಲ್ಲಿ ನಿಂತು ಎಲ್ಲೇ ಕಲ್ಲು ಎಸೆದರೂ ಅದು ಬಿದ್ದ ಜಾಗ ವಕ್ಫ್ ಆಸ್ತಿ ಎನ್ನುವಂತಾಗಿದೆ. ಭೋವಿ ಸಮಾಜದವರಿಗೆ ಮನೆ ನಿರ್ಮಾಣ ಮಾಡಬೇಕು ಎಂದು ಮೂರು ವರ್ಷಗಳ ಹಿಂದೆ ಹಣ ಬಿಡುಗಡೆ ಮಾಡಲಾಗಿದೆ. ಆದರೆ, ಆ ಜಾಗವನ್ನೂ ವಕ್ಫ್ ಆಸ್ತಿ ಎನ್ನುತ್ತಾರೆ ಎಂದು ಬಸವರಾಜ ಬೊಮ್ಮಾಯಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಾಗಿದೆ. ಇದೀಗ ಹೈಕೋರ್ಟ್ ಈ ಒಂದು ಪ್ರಕರಣಕ್ಕೆ ತಡೆಯಾಜ್ಞೆ ನೀಡಿ ಆದೇಶ ನೀಡಿದೆ.