ಬೆಂಗಳೂರು : ಅಧಿಕಾರದಲ್ಲಿ ಇಲ್ಲದೆ ಇದ್ದರೂ ಕೂಡ ಮಾಜಿ ಶಾಸಕರು ಸಂಸದರು ರಾಷ್ಟ್ರೀಯ ಲಾಂಛನ, ರಾಷ್ಟ್ರೀಯ ಧ್ವಜ ಹಾಗೂ ಸರ್ಕಾರದ ಲೆಟರ್ ಹೆಡ್ ಗಳನ್ನು ಬಳಸುತ್ತಿರುವುದಕ್ಕೆ ಕರ್ನಾಟಕ ಹೈಕೋರ್ಟ್ ಆಕ್ರೋಶ ಹೊರ ಹಾಕಿದ್ದು, ಇದೀಗ ರಾಷ್ಟ್ರೀಯ ಲಾಂಛನಗಳ ಬಳಕೆಗೆ ಸಂಬಂಧಿಸಿದಂತೆ ಹಲವು ಮಾರ್ಗಸೂಚಿಗಳನ್ನು ರಚಿಸಿ ಆದೇಶ ಹೊರಡಿಸಿದೆ.
ಮಾಜಿ ಶಾಸಕರು, ಸಂಸದರು ರಾಷ್ಟ್ರೀಯ ಲಾಂಛನಗಳು ಮತ್ತು ಧ್ವಜಗಳನ್ನು ತಮ್ಮ ಲೆಟರ್‌ಹೆಡ್ ಹಾಗೂ ವಾಹನಗಳಿಗೆ ಬಳಕೆ ಮಾಡುತ್ತಿರುವುದು ನಿಜಕ್ಕೂ ದುರುದೃಷ್ಠಕರ ಎಂದಿರುವ ಹೈಕೋರ್ಟ್, ರಾಷ್ಟ್ರೀಯ ಲಾಂಚನಗಳು ಮತ್ತು ಧ್ವಜದ ಹೆಸರುಗಳನ್ನು ಬಳಕೆ ತಡೆಯಲು ಕೋರಿ ಹೈಕೋರ್ಟ್ ಕಾನೂನು ಸೇವೆಗಳ ಸಮಿತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಸಾರ್ವಜನಿಕ ಸ್ಥಳಗಳು ಮತ್ತು ವಾಹನಗಳಲ್ಲಿ ರಾಷ್ಟ್ರೀಯ ಚಿಹ್ನೆಗಳು ಮತ್ತು ಲಾಂಛನಗಳನ್ನು ಅನಧಿಕೃತ ಬಳಕೆ ಮತ್ತು ದುರುಪಯೋಗ ತಡೆಗಟ್ಟಲು 1950ರ ಲಾಂಛನಗಳು ಮತ್ತು ಹೆಸರುಗಳ (ಅನುಚಿತ ಬಳಕೆ ತಡೆಗಟ್ಟುವಿಕೆ) ಕಾಯಿದೆ ಮತ್ತು 1982ರ ಲಾಂಛನಗಳು ಮತ್ತು ಹೆಸರುಗಳು (ಅನುಚಿತ ಬಳಕೆ ತಡೆಗಟ್ಟುವಿಕೆ) ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಅಲ್ಲದೆ, ಭಾರತದ ರಾಜ್ಯ ಲಾಂಛನ (ಅನುಚಿತ ಬಳಕೆ ನಿಷೇಧ) ಕಾಯ್ದೆ, 2005, ಮತ್ತು ಭಾರತದ ರಾಜ್ಯ ಲಾಂಛನ (ಬಳಕೆ ನಿಯಂತ್ರಣ) ನಿಯಮಗಳು, 2007, 2010ರ ನಿಯಮಗಳು ಮತ್ತು ಕೇಂದ್ರ ಮೋಟಾರು ವಾಹನ ನಿಯಮಗಳು, 1989ರ ಎಲ್ಲ ಕಾಯಿದೆಗಳಲ್ಲಿ ಅನ್ವಯವಾಗುವ ನಿಯಮಗಳು, ಮತ್ತು ಕರ್ನಾಟಕ ಮೋಟಾರು ವಾಹನ ನಿಯಮಗಳು, 1989, ವಿಶೇಷವಾಗಿ 145-A (ರಾಜ್ಯ ಲಾಂಛನದ ಅನುಚಿತ ಬಳಕೆಯನ್ನು ನಿಷೇಧಿಸುವುದು) ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಕೋರ್ಟ್ ಸೂಚಿಸಿದೆ.