ಬೆಂಗಳೂರು : ಇತ್ತೀಚಿಗೆ ಗೃಹ ಸಚಿವ ಜಿ ಪರಮೇಶ್ವರ್ ಅವರು ಸಿದ್ದರಾಮಯ್ಯ ಸರ್ಕಾರದಲ್ಲಿ ಅಭಿವೃದ್ಧಿಗೆ ಹಣ ಇಲ್ಲ ಎಂದು ಹೇಳಿಕೆ ನೀಡಿದ್ದರು. ಬಳಿಕ ಆ ಒಂದು ಹೇಳಿಕೆ ನಾನು ತಮಾಷೆಯಾಗಿ ಹೇಳಿದ್ದೇನೆ ಎಂದು ಹೇಳಿಕೆಯಿಂದ ನುಣುಚಿಕೊಳ್ಳಲು ಯತ್ನಿಸಿದರು. ಸಚಿವ ಪರಮೇಶ್ವರ್ ಬಳಿಕ ಇದೀಗ ಸಹಕಾರ ಸಚಿವ ಕೆ ಎನ್ ರಾಜಣ್ಣ ರಾಜ್ಯದ ಜನತೆಗೆ ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದ್ದರಿಂದ ಸರ್ಕಾರದ ಮೇಲೆ ಆರ್ಥಿಕ ಹೊರೆ ಇದೆ ಎಂದು ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2013ರಲ್ಲಿ ಇದ್ದಂತೆ ಸಿಎಂ ಈ ಬಾರಿ ಇಲ್ಲ ಅನ್ನೋ ಹೇಳಿಕೆ ವಿಚಾರವಾಗಿ, ಏನು ಮಾಡುವುದು ಪವರ್ ಸೆಂಟರ್ಗಳು ಜಾಸ್ತಿ ಆಗಿವೆ. 2013 ರಿಂದ 18 ರವರೆಗೆ ಒಂದೇ ಪವರ್ ಸೆಂಟರ್ ಇತ್ತು. ಈಗ ಒಂದು ಎರಡು ಮೂರು ಲೆಕ್ಕ ಎಷ್ಟಾದರೂ ಹಾಕಿಕೊಳ್ಳಿ. 2013 ರಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಯಾವುದೇ ಒತ್ತಡ ಇರಲಿಲ್ಲ. ಪವರ್ ಸೆಂಟರ್ ಜಾಸ್ತಿಯಾಗಿದ್ದರಿಂದ ಜಂಜಾಟ ಹೆಚ್ಚಾಗಿದೆ. ಸಿಎಂ ರಾಜ್ಯಾದ್ಯಂತ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಕೊಡುತ್ತಿದ್ದಾರೆ ಹಣ ಇಲ್ಲದಿದ್ದರೆ ಕಾಮಗಾರಿಗಳಿಗೆ ಚಾಲನೆ ನೀಡಲು ಆಗುತ್ತಾ? ಎಂದು ಪ್ರಶ್ನಿಸಿದರು.
ಬೇಡಿಕೆಗೆ ತಕ್ಕಂತೆ ಅನುದಾನ ಸಿಕ್ಕಿಲ್ಲವೆಂದು ಬೇಸರ ಇರಬಹುದು ಗ್ಯಾರಂಟಿ ಕೊಟ್ಟಿದ್ದರಿಂದ ಆರ್ಥಿಕ ಹೊರೆ ಸರ್ಕಾರದ ಮೇಲೆ ಇದೆ. ಆರ್ಥಿಕ ಲಭ್ಯತೆಗೆ ಅನುಗುಣವಾಗಿ ಯಾವುದೇ ತಾರತಮ್ಯ ಇಲ್ಲ. ಆಡಳಿತ ಪಕ್ಷ ಇರಬಹುದು ಅಥವಾ ವಿರೋಧ ಪಕ್ಷ ಅಂತ ಯಾವುದೇ ತಾರತಮ್ಯ ಇಲ್ಲ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಒದಗಿಸುತ್ತೇವೆ ಅನುದಾನ ಕೊಟ್ಟಿಲ್ಲ ಅನ್ನೋದು ಸತ್ಯಕ್ಕೆ ದೂರವಾದ ಮಾತು ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ಹೇಳಿಕೆ ನೀಡಿದರು.