ಬೆಳಗಾವಿ : ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚಿಕ್ಕೊಪ್ಪ ಕೆ.ಎಂ. ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪೃಥ್ವಿ ಹೋಳಿ ದ್ವಿತೀಯ ಪಿಯು ಕಲಾ ವಿಭಾಗದಲ್ಲಿ 570 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದು, ಇತಿಹಾಸ ವಿಷಯದಲ್ಲಿ 100ಕ್ಕೆ 100 ಅಂಕ ಪಡೆದಿದ್ದಾರೆ.
ಈ ಕುರಿತು ರಾಜ್ಯ ಸರ್ಕಾರ ಮಾಹಿತಿ ನೀಡಿದ್ದು, ತಂದೆ ಇಲ್ಲದ ಪೃಥ್ವಿಯ ತಾಯಿ ಶ್ಯಾಮಲಾ ಹೋಳಿ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಅವರಿಗೆ ಬರುವ ಗೃಹಲಕ್ಷ್ಮಿ ಹಣವು ಪೃಥ್ವಿಯ ವಿದ್ಯಾಭ್ಯಾಸಕ್ಕೆ ನೆರವಾಗಿದೆ. ಪ್ರತಿದಿನವೂ ಪರಿಪೂರ್ಣ ಶಿಕ್ಷಣಕ್ಕೆ ಹಂಬಲಿಸಿದ ಹೆಣ್ಣು ಮಗಳ ಕನಸು ಈ ಯೋಜನೆಯ ಮೂಲಕ ಸಾಕಾರಗೊಂಡಿದೆ ಎಂದು ತಿಳಿಸಿದೆ.
ಬಡತನ ನಾಡಿನ ಮಕ್ಕಳ ಕಲಿಕಾ ಸಾಧನೆಗೆ ಅಡ್ಡಿಯಾಗಬಾರದು, ಅಂತಹ ವ್ಯವಸ್ಥೆಯೊಂದನ್ನು ನಿರ್ಮಾಣ ಮಾಡಬೇಕು ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಾಗಿತ್ತು. ಗೃಹಲಕ್ಷ್ಮಿ ಯೋಜನೆಯು ಆ ಕನಸನ್ನು ಸಾಕಾರಗೊಳಿಸುತ್ತಿದೆ ಎಂದು ಹೇಳಿದೆ.