ಮಂಡ್ಯ : ರಾಜ್ಯ ಸರ್ಕಾರ ಜಾರಿ ಮಾಡಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ಮಹಿಳೆಯರು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣದಿಂದ ಎಷ್ಟೋ ಹೆಣ್ಣುಮಕ್ಕಳು ಸಮಾಜಕ್ಕೆ ಮಾದರಿಯಾಗಿದ್ದಾರೆ. ಇದೀಗ ಮಂಡ್ಯದಲ್ಲಿ ಮತ್ತೋರ್ವ ಮಹಿಳೆ ಸಮಾಜಕ್ಕೆ ಮಾದರಿಯಾಗಿದ್ದು, ಗೃಹಲಕ್ಷ್ಮಿಯಿಂದ ಬಂದ 30 ಸಾವಿರ ಹಾಗೂ ತಾವು ಕೂಡಿಟ್ಟ 20 ಸಾವಿರ ಹಣವನ್ನು ಸೇರಿಸಿ ತಮ್ಮೂರಿನ ಸರ್ಕಾರೀ ಶಾಲೆಗೆ ವಾಟರ್ ಫಿಲ್ಟರ್ ಕೊಡುಗೆ ನೀಡಿದ್ದಾರೆ.
ಹೌದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಬಾಬುರಾಯ ಕೊಪ್ಪಲು ಗ್ರಾಮದ ಗೃಹಿಣಿ ವಿಜಯಲಕ್ಷ್ಮಿ ಅವರು ತಮ್ಮೂರಿನ ಸರ್ಕಾರಿ ಶಾಲೆಯ ಮಕ್ಕಳಿಗಾಗಿ ತಮಗೆ ಬಂದಿದ್ದ ಗೃಹಲಕ್ಷಿ ಯೋಜನೆಯ 30 ಸಾವಿರ ಹಣದ ಜೊತೆಗೆ ತಾವು ಕೂಡಿಟ್ಟಿದ್ದ ಸ್ವಲ್ಪ ಹಣದ ಜೊತೆ 50 ಸಾವಿರ ರೂ. ಮೌಲ್ಯದ ಕುಡಿಯುವ ನೀರಿನ ವಾಟರ್ ಫಿಲ್ಟರ್ ಅನ್ನು ಕೊಡಿಸಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.ಗ್ರಾಮದಲ್ಲಿನ ಈ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಕುಡಿಯುವ ನೀರಿನ ಸಮಸ್ಯೆ ಅರಿತು, ಶಾಲೆಗೆ ವಾಟರ್ ಫಿಲ್ಟರ್ ಕೊಡುಗೆಯಾಗಿ ಕೊಟ್ಟ ದಂಪತಿಯ ಕಾರ್ಯಕ್ಕೆ ಶಾಲೆಯ ಶಿಕ್ಷಕರು ಸೇರಿದಂತೆ ವಿದ್ಯಾರ್ಥಿಗಳು ಧನ್ಯವಾದ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊಟ್ಟ ಭರವಸೆಯಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿತ್ತು. ಅದರಲ್ಲಿ ಪ್ರತಿ ಮನೆಯ ಕುಟುಂಬದ ಯಜಮಾನಿಗೆ ಗೃಹಲಕ್ಷ್ಮಿ ಯೋಜನೆ ಹೆಸರಲ್ಲಿ ಪ್ರತಿ ತಿಂಗಳು 2000 ರೂ. ಕೂಡ ಒಂದು. ಕಳೆದ 15 ತಿಂಗಳಿಂದಲೂ ಈ ಹಣ ಮನೆಯ ಯಜಮಾನಿಯರ ಖಾತೆಗೆ ಬರುತ್ತಿದೆ. ಸರ್ಕಾರ ಈ ಹಣದಿಂದ ಸಾಕಷ್ಟು ಬಡ ಕುಟುಂಬಗಳಿಗೆ ಆರ್ಥಿಕ ಸಹಾಯ ಕೂಡ ಆಗಿದೆ.