ಬೆಂಗಳೂರು: ರಾಜ್ಯ ಕಂದಾಯ ಇಲಾಖೆಯಲ್ಲಿ ಸರ್ಕಾರದ ಪೂರ್ವಾನುಮತಿ ಇಲ್ಲದೆ ಯಾವುದೇ ಹೊಸ ಗ್ರಾಮ ಸಹಾಯಕರ ನೇಮಕಾತಿ ಮಾಡಿಕೊಳ್ಳಬಾರದು ಎಂದು ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಅವರು ಈ ಕುರಿತು ಜೂನ್ 05, 2026 ರಂದು ಅಧಿಕೃತ ಸುತ್ತೋಲೆ ಹೊರಡಿಸಿದ್ದು, ನಿಯಮ ಉಲ್ಲಂಘಿಸುವ ತಹಶೀಲ್ದಾರ್ಗಳ ವಿರುದ್ಧ ಕಠಿಣ ಕ್ರಮದ ಮುನ್ಸೂಚನೆ ನೀಡಿದ್ದಾರೆ.
ನಿಯಮ ಉಲ್ಲಂಘಿಸಿ ನೇಮಕಾತಿ: ತಹಶೀಲ್ದಾರ್ಗಳಿಗೆ ಎಚ್ಚರಿಕೆ
ರಾಜ್ಯದ ಕಂದಾಯ ಇಲಾಖೆಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ (VA) ಕೆಲಸಕ್ಕೆ ನೆರವಾಗಲು ಹಾಗೂ ಸ್ಥಳೀಯ ಮಟ್ಟದ ಆಡಳಿತಾತ್ಮಕ ಅನುಕೂಲಕ್ಕಾಗಿ ಒಟ್ಟು 10,450 ಗ್ರಾಮ ಸಹಾಯಕರ ಹುದ್ದೆಗಳನ್ನು ಮಿತವೇತನದ ಆಧಾರದ ಮೇಲೆ ಖಾಯಂ ಆಗಿ ಸೃಜಿಸಲಾಗಿದೆ. ಆಡಳಿತಾತ್ಮಕ ಹಿತದೃಷ್ಟಿಯಿಂದ ಸರ್ಕಾರವು ಕಾಲಕಾಲಕ್ಕೆ ಗ್ರಾಮ ಆಡಳಿತ ಅಧಿಕಾರಿಗಳ ಹೊಸ ವೃತ್ತಗಳನ್ನು ಹೆಚ್ಚುವರಿಯಾಗಿ ಸೃಜಿಸುತ್ತಾ ಬಂದಿದೆ.
ಆದರೆ, ಈ ರೀತಿ ಹೊಸದಾಗಿ ಸೃಜನೆಯಾದ ಗ್ರಾಮ ಆಡಳಿತ ಅಧಿಕಾರಿಗಳ ವೃತ್ತಗಳಿಗೆ ಹೆಚ್ಚುವರಿಯಾಗಿ ಯಾವುದೇ ಗ್ರಾಮ ಸಹಾಯಕರ ಹುದ್ದೆಗಳನ್ನು ಸರ್ಕಾರ ಮಂಜೂರು ಮಾಡಿಲ್ಲ. ಹೀಗಿದ್ದರೂ, ಕೆಲವು ತಹಶೀಲ್ದಾರ್ಗಳು ನಿಯಮಗಳನ್ನು ಗಾಳಿಗೆ ತೂರಿ, ಮಂಜೂರಾತಿ ಇಲ್ಲದಿದ್ದರೂ ಹೊಸ ವೃತ್ತಗಳಿಗೆ ಗ್ರಾಮ ಸಹಾಯಕರನ್ನು ನೇಮಕ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.
ವೇತನ ಬಿಡುಗಡೆಗೆ ತೊಂದರೆ, ಸರ್ಕಾರದ ಖಡಕ್ ಸೂಚನೆ
ಹೀಗೆ ಮಂಜೂರಾತಿ ಇಲ್ಲದ ಹುದ್ದೆಗಳಿಗೆ ಸರ್ಕಾರದ ಪೂರ್ವಾನುಮತಿ ಇಲ್ಲದೆ ನೇಮಕಗೊಂಡಿರುವ ಗ್ರಾಮ ಸಹಾಯಕರ ವೇತನ ಪಾವತಿಗೆ ಅನುದಾನದ ಕೊರತೆ ಎದುರಾಗಿದೆ. ಪ್ರಸ್ತುತ ಇಂತಹ ಸಿಬ್ಬಂದಿಗಳಿಗೆ ವೇತನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆಗಳು ಸಲ್ಲಿಕೆಯಾಗುತ್ತಿವೆ.
ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕಂದಾಯ ಇಲಾಖೆ, “ಇನ್ನು ಮುಂದೆ ಸರ್ಕಾರದ ಪೂರ್ವಾನುಮತಿ ಇಲ್ಲದೆ ಯಾವುದೇ ಗ್ರಾಮ ಸಹಾಯಕರ ನೇಮಕಾತಿಯನ್ನು ಮಾಡಬಾರದು” ಎಂದು ರಾಜ್ಯದ ಎಲ್ಲಾ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರ್ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.









