ಬೆಂಗಳೂರು: ರಾಜ್ಯ ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮೇ 20 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ 1 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಹೊಸಪೇಟೆಯಲ್ಲಿ ಮೇ 20 ರಂದು ವಿವಿಧ ಸವಲತ್ತು ಗಳ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇದು ಸಂಭ್ರಮಾಚರಣೆ ಅಲ್ಲ. ನಾವು ಮಾಡಿರುವ ಕೆಲಸ ಜನರಿಗೆ ಸಮರ್ಪಣೆ ಮಾಡುವ ಕಾರ್ಯಕ್ರಮ ಎಂದರು. ಜನರಿಗೆ ಸಮರ್ಪಣೆ ಹಾಗೂ ಮುಂದಿನ ಕಾರ್ಯಕ್ರಮಗಳ ಬಗ್ಗೆ ಸಂಕಲ್ಪ ಮಾಡಲು ಕಾರ್ಯಕ್ರಮ ಮಾಡುತ್ತಿದ್ದೇವೆ. ಆಸ್ತಿ ಗಳನ್ನು ಹೊಂದಿರುವ ಹಲವರಿಗೆ ದಾಖಲೆಗಳು ಇರಲಿಲ್ಲ. ಹೀಗಾಗಿ 2 ವರ್ಷದಲ್ಲಿ ನೋಂದಣಿ ಮಾಡಿದ 1 ಲಕ್ಷ ಹಕ್ಕು ಪತ್ರಗಳನ್ನು ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ. ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಆಗಮಿಸುತ್ತಾರೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರವು ಎರಡು ವರ್ಷ ಪೂರೈಸುತ್ತಿರುವ ಹಿನ್ನೆಲೆ ಜನಪರ ಆಡಳಿತಕ್ಕೆ ಸಾಕ್ಷಿಯಾಗಿ ಕಂದಾಯ ಗ್ರಾಮಗಳ 1 ಲಕ್ಷ ಕುಟುಂಬಗಳಿಗೆ ಶಾಶ್ವತ ಡಿಜಿಟಲ್ ಹಕ್ಕುಪತ್ರ ವಿತರಿಸಲು ಉದ್ದೇಶಿಸಲಾಗಿದೆ. ಹೊಸಪೇಟೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಕ್ಕುಪತ್ರ ವಿತರಿಸಲಿದ್ದಾರೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದರು.