ಬೆಂಗಳೂರು : ರಾಜ್ಯದ ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಗಳು / ಯೋಜನಾ ಪ್ರಾಧಿಕಾರಗಳು/ ಪುರಸಭಾ ಯೋಜನಾ ಪ್ರಾಧಿಕಾರಗಳು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯ ಕಲಂ 18 (1-A) ರಡಿಯಲ್ಲಿ ಪಾವತಿಸಿಕೊಳ್ಳುವ ಕೆರೆ ಪುನರುಜ್ಜಿವನ ಶುಲ್ಕವನ್ನು ವಿನಿಯೋಗಿಸುವ ಬಗ್ಗೆ ಮಾರ್ಗಸೂಚಿ ಹೊರಡಿಸಿದೆ.
ರಾಜ್ಯದ ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಗಳು/ ಯೋಜನಾ ಪ್ರಾಧಿಕಾರಗಳು/ ಪುರಸಭಾ ಯೋಜನಾ ಪ್ರಾಧಿಕಾರಗಳಲ್ಲಿ ಸಂಗ್ರಹಿಸಲಾಗುತ್ತಿರುವ ಕೆರೆ ಪುನರುಜೀವನ ಶುಲ್ಕವನ್ನು ವಿನಿಯೋಗಿಸಲು ಉಲ್ಲೇಖಿತ ಸುತ್ತೋಲೆಯಲ್ಲಿ ಮಾರ್ಗ ಸೂಚಿಗಳನ್ನು ಹೊರಡಿಸಲಾಗಿರುತ್ತದೆ.
ಸದರಿ ಸುತ್ತೋಲೆ ಅನುಸಾರ ಕೆರೆ ಪುನರುಜೀವನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸುತ್ತೋಲೆಯಲ್ಲಿನ ಮಾರ್ಗಸೂಚಿಗಳು ಸುಧೀರ್ಘ ಪ್ರಕ್ರಿಯೆಗಳನ್ನು ಒಳಗೊಂಡಿರುವುದರಿಂದ ವಿಳಂಬಕ್ಕೆ ಕಾರಣವಾಗುತ್ತಿರುವುದಾಗಿ ವಿವಿಧ ಪ್ರಾಧಿಕಾರಗಳಿಂದ ವರದಿಗಳನ್ನು ಸ್ವೀಕರಿಸಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಉಲ್ಲೇಖಿತ ಸುತ್ತೋಲೆಯಲ್ಲಿನ ವಿಳಂಬಕ್ಕೆ ಕಾರಣವಾಗುವ ಅಂಶಗಳನ್ನು ಸರಳೀಕರಣಗೊಳಿಸಿ ಮಾರ್ಪಡಿತ ಮಾರ್ಗಸೂಚಿಗಳನ್ನು ಹೊರಡಿಸುವುದು ಅವಶ್ಯಕವಾಗಿರುತ್ತದೆ.
ಮಾರ್ಪಡಿತ ಮಾರ್ಗಸೂಚಿಗಳನ್ವಯ ಕೆರೆ ಪುನರುಜ್ಜಿವನ ಕಾಮಗಾರಿಗಳನ್ನು ನಗರಾಭಿವೃದ್ಧಿ ಪ್ರಾಧಿಕಾರಗಳು/ ಯೋಜನಾ ಪ್ರಾಧಿಕಾರಗಳು/ ಪುರಸಭಾ ಯೋಜನಾ ಪ್ರಾಧಿಕಾರಗಳಿಂದ ತ್ವರಿತವಾಗಿ ಹಾಗೂ ಸುಗಮವಾಗಿ ಕೈಗೆತ್ತಿಕೊಳ್ಳಲು ಅನುಕೂಲವಾಗುವಂತೆ ಹಾಗೂ ಕರಅಭಿವೃದ್ಧಿಗೆ ಸಂಬಂಧಪಟ್ಟಂತೆ ವಿವಿಧ ಇಲಾಖೆಗಳು/ಮಂಡಳಿಗಳು ನೀಡಬೇಕಾಗಿರುವ ನಿರಾಕ್ಷೇಪಣಾ ಪತ್ರಗಳನ್ನು ನಿಗಧಿತ ಕಾಲಮಿತಿಯಲ್ಲಿ ಒಂದೇ ಸೂರಿನಡಿ ಒದಗಿಸಿಕೊಡುವ ಉದ್ದೇಶದಿಂದ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಈ ಕೆಳಕಂಡಂತೆ ಏಕ ಗವಾಕ್ಷಿ ಸಮಿತಿಯನ್ನು ರಚಿಸಲಾಗಿದೆ:
ಮೇಲ್ಕಂಡ ಏಕಗವಾಕ್ಷಿ ಸಮಿತಿಯ ಕರ್ತವ್ಯ ಹಾಗೂ ಜವಾಬ್ದಾರಿಗಳು ಈ ಕೆಳಕಂಡಂತಿರುತ್ತವೆ:
1. ನಗರಾಭಿವೃದ್ಧಿ ಪ್ರಾಧಿಕಾರಗಳು/ ಯೋಜನಾ ಪ್ರಾಧಿಕಾರಗಳು/ ಪುರಸಭಾ ಯೋಜನಾ ಪ್ರಾಧಿಕಾರಗಳ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಕೆರೆಗಳನ್ನು ಮಾತ್ರ ಆಯ್ಕೆ ಮಾಡತಕ್ಕದ್ದು.
2. ಕರೆಗಳನ್ನು ಆಯ್ಕೆ ಮಾಡುವಾಗ ಕುಡಿಯುವ ನೀರಿಗೆ ಬಳಸುವ ಉದ್ದೇಶಕ್ಕೆ ಆದ್ಯತೆ ನೀಡತಕ್ಕದ್ದು.
3. ಕೆರೆಯ ಮಾಲೀಕತ್ವ ಹೊಂದಿರುವ ಇಲಾಖೆ /ಮಂಡಳಿ /ಸ್ಥಳೀಯ ಸಂಸ್ಥೆಗಳು ಕಂದಾಯ ದಾಖಲೆಗಳನ್ನಯ ಕೆರೆಯ ವಿಸ್ತೀರ್ಣಕ್ಕೆ ಅನುಗುಣವಾಗಿ ಗಡಿಗಳನ್ನು ಗುರುತಿಸಿ, ಯಾವುದೇ ಒತ್ತುವರಿ ಆಗಿದ್ದಲ್ಲಿ, ತೆರವುಗೊಳಿಸಿ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಅಭಿವೃದ್ಧಿಗಾಗಿ ಹಸ್ತಾಂತರಿಸಲು ಕ್ರಮವಹಿಸತಕ್ಕದ್ದು.
4. ಕಲ್ಮಶ/ತ್ಯಾಜ್ಯದಿಂದ ಕಲುಷಿತಗೊಂಡ ಕೆರೆಗಳಿದ್ದಲ್ಲಿ ಸದರಿ ಕೆರೆಯ ಲಭ್ಯ ನೀರಿನ ಗರಿಷ್ಠ ಬಳಕೆಗೆ ಅನುಗುಣವಾಗಿ ಆದ್ಯತೆ ನೀಡುವುದು.
5. ಆಯ್ಕೆ ಮಾಡಿದ ಕೆರೆಗೆ ಸಂಬಂಧಿಸಿದಂತೆ ವಿವಿಧ ಕಾಮಗಾರಿಗಳಾದ ತಡ ಬೇಲಿ ನಿರ್ಮಾಣ, ಕೆರೆ ಹೂಳು ತೆಗೆಯುವುದು ಮತ್ತು ಕೆರೆಯ ನೀರಿನ ಸಂಗ್ರಹಣೆ ಹೆಚ್ಚಿಸುವ ನಿಟ್ಟಿನಲ್ಲಿ ಅಂತರ್ ಜಲವನ್ನು ಮರು ಪೂರ್ಣಗೊಳಿಸುವುದು, ಕೆರೆ ಒತ್ತುವರಿ ತಡೆಯಲು ಅಗತ್ಯ ಗಿಡ ಮರಗಳನ್ನು ಕೆರೆಯ ಎಲ್ಲೆಯಲ್ಲಿ ಬೆಳಸುವುದು, ಕೆರೆ ನೀರಿನ ಶುದ್ದೀಕರಣ, ನೀರಿನ ಗುಣ ಮಟ್ಟವನ್ನು ಸುಧಾರಿಸುವುದು, ಕೊಳಚೆ ನೀರು ಕೆರೆಗೆ ಸೇರದಂತೆ ತಡೆಯುವ ಕಾಮಗಾರಿ, ವಾಯು ವಿಹಾರಕ್ಕೆ ಅಗತ್ಯವಿರುವ ಪಾದಚಾರಿ ಮಾರ್ಗ, ಪ್ರವಾಸೋದ್ಯಮ ಉತ್ತೇಜಿಸುವ ಕಾಮಗಾರಿಗಳು ಹಾಗೂ ಇನ್ನಿತರೆ ಕಾಮಗಾರಿಗಳನ್ನು ಕೈಗೊಳ್ಳಲು ಪ್ರಾಧಿಕಾರಗಳಿಗೆ ಮಾರ್ಗದರ್ಶನ ನೀಡತಕ್ಕದ್ದು.
6. ಸಮಿತಿಯು ಪ್ರಾಧಿಕಾರಗಳಿಗೆ ವಿಸ್ತ್ರತ ಯೋಜನಾ ವರದಿ (DPR) ತಯಾರಿಸಲು ಅಗತ್ಯ ಸಲಹೆ/ಸೂಚನೆಗಳನ್ನು ನೀಡುವುದು.
ಏಕಗವಾಕ್ಷಿ ಸಮಿತಿಯು ಆಯ್ಕೆ ಮಾಡುವ ಕೆರೆ ಹಾಗೂ ನೀಡಿರುವ ಸಲಹೆ/ಸೂಚನೆಗಳನ್ನು ಪರಿಗಣಿಸಿ, ಕೆರೆಯ ಪುನರುಜ್ಜಿವನ ಹಾಗೂ ಸಂರಕ್ಷಣೆಗಾಗಿ ವಿಸ್ತ್ರತ ಯೋಜನಾ ವರದಿ(DPR) ಯನ್ನು ಸಂಬಂಧಿಸಿದ ನಗರಾಭಿವೃದ್ಧಿ ಪ್ರಾಧಿಕಾರಗಳು, ಯೋಜನಾ ಪ್ರಾಧಿಕಾರಗಳು ಹಾಗೂ ಪುರಸಭೆ ಯೋಜನಾ ಪ್ರಾಧಿಕಾರಗಳು ಸಿದ್ಧಪಡಿಸಿ, ಅಗತ್ಯ ದಾಖಲಾತಿಗಳೊಡನೆ ಸರ್ಕಾರದ ಪೂರ್ವಾನುಮತಿಗಾಗಿ ಸಲ್ಲಿಸತಕ್ಕದ್ದು.