ಕೊಪ್ಪಳ : ಇದು ಕರ್ನಾಟಕ ರಾಜ್ಯದಲ್ಲಿಯೇ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಭಕ್ತರು ಸೇರಿ ನಡೆಸುವಂತಹ ಅತೀ ದೊಡ್ಡ ಜಾತ್ರೆ. ಇದು ದಕ್ಷಿಣ ಭಾರತದ ಕುಂಭಮೇಳ ಎಂದೇ ಪ್ರಸಿದ್ಧಿಯಾಗಿದೆ. ಅದುವೇ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆ. ಹೌದು ಈಗಾಗಲೇ ಕೊಪ್ಪಳದ ಐತಿಹಾಸಿಕ ಗವಿಸಿದ್ದೇಶ್ವರ ಜಾತ್ರೆಗೆ ಭರ್ಜರಿ ಸಿದ್ಧತೆ ನಡೆದಿದೆ.
ಕೊಪ್ಪಳದ ಐತಿಹಾಸಿಕ ಗವಿಸಿದ್ದೇಶ್ವರ ಜಾತ್ರೆಗೆ ಭರ್ಜರಿ ಸಿದ್ಧತೆ ನಡೆದಿದೆ. ಸ್ವತಃ ಶ್ರೀಗಳೆ ಮುಂದೆ ನಿಂತು ಎಲ್ಲಾ ಸಿದ್ಧತಾ ಕಾರ್ಯವನ್ನ ನೋಡಿಕೊಳ್ಳುತ್ತಿದ್ದಾರೆ. ಪ್ರತಿವರ್ಷ ನಡೆಯುವ ಕೊಪ್ಪಳದ ಸುಪ್ರಸಿದ್ದ ಗವಿಸಿದ್ದೇಶ್ವರ ಮಠದ ಜಾತ್ರೆಯನ್ನು, ದಕ್ಷಿಣ ಭಾರತದ ಕುಂಬಮೇಳ ಅಂತಲೇ ಕರೆಯುತ್ತಾರೆ. ಈ ವರ್ಷ ಜನವರಿ 15 ರಂದು ಗವಿಮಠದ ರಥೋತ್ಸವ ನಡೆಯುತ್ತದೆ. ಜನವರಿ 12 ರಿಂದ ಮಠದಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗುತ್ತವೆ.
ನಾಡಿನ ಅನೇಕ ಕಡೆಯಿಂದ ಬರುವ ಭಕ್ತರು ಗವಿಸಿದ್ದೇಶ್ವರ ಮಠದ ಜಾತ್ರೆಯನ್ನು ಕಣ್ತುಂಬಿಕೊಂಡು, ಕೃತಾರ್ಥರಾಗುತ್ತಾರೆ.ಇನ್ನು ಮತ್ತೊಂದು ಮಾದರಿ ಹೆಜ್ಜೆ ಇಟ್ಟಿರೋ ಶ್ರೀಗಳು ವಿಶೇಷ ಚೇತನರಲ್ಲಿ ಆತ್ಮಸ್ಥೈರ್ಯ ತುಂಬುವ ಕಾರ್ಯಕ್ಕೆ ಮುನ್ನುಡಿ ಬರೆದಿದ್ದಾರೆ. ವಿಶೇಷ ಚೇತನರಿಗೆ ಕೃತಕ ಅಂಗಾಗ ಜೋಡನೆ ಮೂಲಕ ಸಾಮಾಜಿಕ ಕಾರ್ಯಕ್ಕೂ ಕೈಹಾಕಿ ಮಾದರಿ ನಡೆ ಅನುಸರಿಸಿರುವುದು ವಿಶೇಷ.
ಜಾಗೃತಿ ಜಾಥಾಗೆ ಚಾಲನೆ
ಇಂದು ಮಠದವತಿಯಿಂದ ಜಾಗೃತಿ ಜಾಥಾ ಕಾರ್ಯಕ್ರಮ ನಡೆಸಲಾಯಿತು. ಈ ವರ್ಷ ಸಕಲಚೇತನ ಎಂಬ ಶಿರ್ಷಿಕೆಯಡಿ, ವಿಕಲಚೇತನರ ನಡೆ ಸಕಲಚೇತನದ ಕಡೆ ಎಂಬ ಘೋಷವಾಕ್ಯದೊಂದಿಗೆ ಜಾತ್ರೆ ಹಮ್ಮಿಕೊಂಡಿದ್ದು ವಿಶೇಷವಾಗಿದೆ. ಈ ಜಾಗೃತಿ ಜಾಥಾಕ್ಕೆ ಕೊಪ್ಪಳ ನಗರದ ತಾಲೂಕು ಕ್ರೀಂಡಾಗಣದಲ್ಲಿ ಚಾಲನೆ ನೀಡಲಾಯಿತು. ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಸಮ್ಮುಖದಲ್ಲಿ, ಅಧಿಕಾರಿಗಳು, ಜನಪ್ರತಿನಿಧಿಗಳು ಜಾಥಾಕ್ಕೆ ಚಾಲನೆ ನೀಡಿದರು.