ಬೆಳಗಾವಿ : ರಾಜ್ಯದಲ್ಲಿ ದ್ವೇಷ ಭಾಷಣ ಹಾಗೂ ದ್ವೇಷ ಅಪರಾಧ ನಿಯಂತ್ರಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ ಮಂಡನೆ ಮಾಡಿದೆ.
ವಿಧಾನಸಭೆಯಲ್ಲಿ ಗೃಹ ಸಚಿವ ಜಿ. ಪರಮೇಶ್ವರ್, ‘ದ್ವೇಷ ಅಪರಾಧಗಳು ಮತ್ತು ದ್ವೇಷ (ಹೋರಾಟ, ತಡೆಯುವಿಕೆ) ವಿಧೇಯಕ- 2025’ ಮಂಡಿಸಿದರು. ರಾಜ್ಯದಲ್ಲಿ ದ್ವೇಷ ಭಾಷಣಕ್ಕೆ ಅಂಕುಶ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ದ್ವೇಷ ಭಾಷಣ ಮಾಡುವ ಮೂಲಕ ಸಮಾಜದಲ್ಲಿ ಅಶಾಂತಿ, ಕೋಮುಗಲಭೆ, ಕಾನೂಜು ಸುವ್ಯವಸ್ಥೆ ಹದಗೆಡುವುದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಈ ವಿಧೇಯಕ ತಂದಿದೆ.
ದ್ವೇಷ ಭಾಷಣದ ಮೂಲಕ ಸಮಾಜದ ಸಾಮರಸ್ಯ ಕದಡುವ ಕೃತ್ಯ ತಡೆಯುವ ಉದ್ದೇಶ ಹೊಂದಿರುವ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ (ಪ್ರತಿಬಂಧಕ) ವಿಧೇಯಕವನ್ನು ಬುಧವಾರ ಸರ್ಕಾರ ಮಂಡಿಸಿತು. ದ್ವೇಷ ಹರಡುವವರಿಗೆ ಗರಿಷ್ಠ 7 ವರ್ಷ ಜೈಲು ಶಿಕ್ಷೆ ವಿಧಿಸುವುದು, ಸಂತ್ರಸ್ತರಿಗೆ ಪರಿಹಾರ ನೀಡುವುದು ಸೇರಿ ಹಲವು ಕಠಿಣ ಅಂಶಗಳನ್ನು ಈ ವಿಧೇಯಕ ಹೊಂದಿದೆ.
ದ್ವೇಷ ಭಾಷಣ ಮತ್ತು ದ್ವೇಷ ಹರಡುವ ಅಪರಾಧ ಎಸಗುವವರಿಗೆ ಒಂದು ವರ್ಷದಿಂದ ಗರಿಷ್ಠ 7 ವರ್ಷಗಳವರೆಗೆ ಜೈಲು ಶಿಕ್ಷೆ, 50 ಸಾವಿರ ರು. ದಂಡ ವಿಧಿಸುವ ಅವಕಾಶವಿದೆ. ಜತೆಗೆ, ಪುನರಾವರ್ತಿತ ಅಪರಾಧಗಳಿಗೆ ಎರಡು ವರ್ಷಗಳಿಂದ 10 ವರ್ಷ ಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರು.ವರೆಗೆ ದಂಡ ವಿಧಿಸಬಹುದು. ಯಾವುದೇ ಸಂಘ-ಸಂಸ್ಥೆ ಅಪರಾಧ ಎಸಗಿದರೆ ಆ ಸಂಘ-ಸಂಸ್ಥೆಯ ಜವಾಬ್ದಾರನಾಗಿರುವ ಪ್ರತಿಯೊಬ್ಬರೂ ಅದರಲ್ಲಿ ಭಾಗೀದಾರರಾಗಲಿದ್ದಾರೆ. ಈ ಅಪರಾಧವನ್ನು ಜಾಮೀನು ರಹಿತ ಎಂದು ಪರಿಗಣಿಸಲಾಗುತ್ತಿದ್ದು, ಪ್ರಥಮ ದರ್ಜೆ ಮಾಜಿಸ್ಟ್ರೇಟ್ ಪ್ರಕರಣದ ವಿಚಾರಣೆ ನಡೆಸಬೇಕು ಎಂದು ವಿಧೇಯಕದಲ್ಲಿ ಉಲ್ಲೇಖಿಸಲಾಗಿದೆ.
ದ್ವೇಷ ಭಾಷಣ ಎಂದರೇನು?
ಯಾವುದೇ ವ್ಯಕ್ತಿ ಪೂರ್ವಕಲ್ಪಿತ ಹಿತಾಸಕ್ತಿಯನ್ನು ಸಾಧಿಸುವ ಉದ್ದೇಶದಿಂದ ಬದುಕಿರುವ ವ್ಯಕ್ತಿ ಅಥವಾ ಮೃತ ವ್ಯಕ್ತಿಗಳ ವರ್ಗ ಅಥವಾ ಗುಂಪು ಅಥವಾ ಸಮುದಾಯದ ವಿರುದ್ಧ ಹಾನಿ, ಅಸಾಮರಸ್ಯ ಅಥವಾ ವೈರತ್ವ ಅಥವಾ ದ್ವೇಷದ, ಕೆಡುಕಿನ ಭಾವನೆ ಮೂಡಿಸುವ ಉದ್ದೇಶದೊಂದಿಗೆ ಸಾರ್ವಜನಿಕ ನೋಟದಲ್ಲಿ ಮೌಖಿಕವಾಗಿ, ಲಿಖಿತ ರೂಪದ ಪದದಲ್ಲಿ ಅಥವಾ ಸಂಕೇತಗಳ ಮೂಲಕ ಅಥವಾ ದೃಶ್ಯರೂಪಕಗಳ ಮೂಲಕ ಅಥವಾ ವಿದ್ಯುನ್ಮಾನ ಸಂವಹನಗಳ ಮೂಲಕ ಅಥವಾ ಇನ್ಯಾವುದೇ ರೀತಿಯಲ್ಲಿ ಮಾಡಲಾದ, ಪ್ರಕಟಿಸಲಾದ ಯಾವುದೇ ಮಾತು ದ್ವೇಷ ಭಾಷಣವಾಗಲಿದೆ.
ಬೆಳಗಾವಿಯ ವಿಧಾನಸಭೆಯಲ್ಲಿ ಮಂಡನೆಯಾಗಿ ಅಂಗೀಕರಿಸಿದ ವಿಧೇಯಕಗಳ ಪಟ್ಟಿ
2025ನೇ ಸಾಲಿನ ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ (ತಿದ್ದುಪಡಿ) ವಿಧೇಯಕ ಹಾಗೂ 2025ನೇ ಸಾಲಿನ ಕರ್ನಾಟಕ ಸಿನಿ ಮತ್ತು ಸಾಂಸ್ಕøತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) (ತಿದ್ದುಪಡಿ) ವಿಧೇಯಕಗಳನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಂಡಿಸಿದರು. ವಿಧೇಯಕದ ಪ್ರಸ್ತಾವವು ವಿಧಾನಸಭೆಯಲ್ಲಿ ಅಂಗೀಕಾರವಾಯಿತು.
2025ನೇ ಸಾಲಿನ ಶ್ರೀ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ, 2025ನೇ ಸಾಲಿನ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ (ತಿದ್ದುಪಡಿ) ವಿಧೇಯಕ, 2025ನೇ ಸಾಲಿನ ಚಂದ್ರಗುತ್ತಿ ಶ್ರೀ ರೇಣುಕಾಂಬ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, 2025ನೇ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮತ್ತು ಇತರ ಕೆಲವು ಕಾನೂನು (ತಿದ್ದುಪಡಿ) ವಿಧೇಯಕ, 2025ನೇ ಸಾಲಿನ ಔಷಧ ಮತ್ತು ಪ್ರಸಾಧನ ಸಾಮಗ್ರಿ (ಕರ್ನಾಟಕ ತಿದ್ದುಪಡಿ) ವಿಧೇಯಕ, 2025ನೇ ಸಾಲಿನ ಕರ್ನಾಟಕ ಬಾಡಿಗೆ (ತಿದ್ದುಪಡಿ) ವಿಧೇಯಕ, 2025ನೇ ಸಾಲಿನ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ (ಎರಡನೇ ತಿದ್ದುಪಡಿ) ವಿಧೇಯಕ, 2025ನೇ ಸಾಲಿನ ಬಯಲುಸೀಮೆ ಪ್ರದೇಶಾಭಿವೃಧ್ಧಿ ಮಂಡಲಿ (ತಿದ್ದುಪಡಿ) ವಿಧೇಯಕ, 2025ನೇ ಸಾಲಿನ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಲಿ (ತಿದ್ದುಪಡಿ) ವಿಧೇಯಕಗಳನ್ನು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ಅವರು ವಿಧಾನಸಭೆಯಲ್ಲಿ ಮಂಡಿಸಿದರು. ವಿಧೇಯಕಗಳ ಪ್ರಸ್ತಾವವು ವಿಧಾನಸಭೆಯಲ್ಲಿ ಅಂಗೀಕಾರವಾಯಿತು.








