ಕೋಲಾರ : ವಿಧಾನಸಭೆಯ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಈ ಹಿಂದೆ ಒತ್ತುವರಿ ಮಾಡಿಕೊಂಡಂತಹ ಜಮೀನು ಸರ್ವೆ ಮಾಡಲು ಹೈಕೋರ್ಟ್ ಆದೇಶ ಹೊರಡಿಸಿತ್ತು. ಈ ಹಿನ್ನೆಲೆ ಇಂದು ಡಿಸಿ ನೇತೃತ್ವದಲ್ಲಿ ಸರ್ವೇ ಕಾರ್ಯ ಆರಂಭವಾಗಿದೆ.
ಸ್ಥಳದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಉಪಸ್ಥಿತಿಯಿದ್ದು, ಜಿಲ್ಲಾಧಿಕಾರಿ ಎಂ.ಆರ್.ರವಿ ನೇತೃತ್ವದಲ್ಲಿ ಸರ್ವೆ ಕಾರ್ಯ ನಡೆದಿದೆ.ಸರ್ವೆ ಕೆಲಸಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ರಮೇಶ್ ಕುಮಾರ್ ಹೇಳಿದ್ದಾರೆ.ಹೈಕೋರ್ಟ್ ನಲ್ಲಿ 2002 ರಲ್ಲಿ ನಾನೇ ಜಂಟಿ ಸರ್ವೆ ಮಾಡಿ ಜಾಗ ಗುರುತಿಸಿ ಕೊಡುವಂತೆ ಮನವಿ ಮಾಡಿದ್ದೇನೆ ನನಗೆ ಒಂದು ಇಂಚು ಅರಣ್ಯ ಭೂಮಿ ಬೇಡ.ನೀವು ಸರ್ವೆ ಮಾಡಿ ಜಾಗ ಗುರುತಿಸಿ ಎಂದು ರಮೇಶ್ ಕುಮಾರ್ ಹೇಳಿದ್ದಾರೆ.
ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಹೊಸಹುಡ್ಯ ಗ್ರಾಮದ ಬಳಿ ಅರಣ್ಯ ವಲಯದ ಜಿನಗಲಕುಂಟೆ ಗ್ರಾಮದಲ್ಲಿ 64 ಎಕರೆ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಲಾಗಿದೆ. ಸಮೀಕ್ಷೆ ಸಂಖ್ಯೆಯ ಅಡಿಯಲ್ಲಿ ಭೂಮಿಯ ಮೇಲೆ ಜಂಟಿ ಸಮೀಕ್ಷೆಯನ್ನು ನಡೆಸಬೇಕು. ಒತ್ತುವರಿ ಕಂಡುಬಂದಲ್ಲಿ, ಅದನ್ನು ತೆರವುಗೊಳಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು.ರಾಜ್ಯ ಅರಣ್ಯ ಇಲಾಖೆಯ ಸಂರಕ್ಷಣಾಧಿಕಾರಿ ಶಿವಶಂಕರ್ ಸೆಂಗುಟ್ಟಿವೇಲ್ ಇತ್ತೀಚೆಗೆ ಪತ್ರ ಬರೆದಿದ್ದು, ಈ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚಿಸಿದ್ದಾರೆ.