ಬೆಂಗಳೂರು : ಗೃಹಲಕ್ಷ್ಮಿ ಹಣ ನಾವು ತಿಂಗಳಿಗೆ ಹಾಕುತ್ತೇವೆ ಅಂತ ಯಾವತ್ತಾದರೂ ಹೇಳಿದ್ದೆವಾ? ನೀವು ಟ್ಯಾಕ್ಸ್ ಕಟ್ಟುತ್ತಿದ್ದರೆ, ಅದರಂತೆ ಗೃಹಲಕ್ಷ್ಮಿ ಹಣ ನೀಡುತ್ತಿವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆಗೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಇದರ ಮಧ್ಯೆ ಗೃಹಲಕ್ಷ್ಮಿ ಯಜಮಾನಿಯರನ್ನು ಆರ್ಥಿಕವಾಗಿ ಮತ್ತಷ್ಟು ಸದೃಢರನ್ನಾಗಿ ಮಾಡುವ ಉದ್ದೇಶದಿಂದ ಗೃಹಲಕ್ಷ್ಮಿ ಸಂಘ ಗಳನ್ನು ರಚಿಸಲು ಕಾರ್ಯಯೋಜನೆ ರೂಪಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯರಿಂದ ಸ್ವಸಹಾಯ/ಸ್ತ್ರೀ ಗುಂಪುಗಳನ್ನು ರಚಿಸುವ ಶಕ್ತಿ ಸಂಬಂಧ ವಿಧಾನಸೌಧದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ಗೃಹಲಕ್ಷ್ಮಿ ಸಂಘವನ್ನು ರಚಿಸಲಾಗುವುದು ಎಂದರು.
ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 1.25 ಕೋಟಿ ಫಲಾನುಭವಿಗಳಿದ್ದಾರೆ. ಪ್ರತಿ ತಿಂಗಳು ಸಂದಾಯ ಆಗುತ್ತಿರುವ 2 ಸಾವಿರ ರೂಪಾಯಿ ಹಣವನ್ನು ಇನ್ನಷ್ಟು ಸದುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಗೃಹಲಕ್ಷ್ಮಿ ಸಂಘಗಳನ್ನು ರಚಿಸಲಾಗುವುದು. ಈ ಮೂಲಕ ಗೃಹಲಕ್ಷ್ಮಿ ಯಜಮಾನಿಯರನ್ನು ಆರ್ಥಿಕವಾಗಿ ಮತ್ತಷ್ಟು ಸದೃಢರನ್ನಾಗಿ ಮಾಡುವುದೇ ಉದ್ದೇಶವಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಈ ಹಿಂದೆ ಮೋಟಮ್ಮನವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿದ್ದಾಗ ಸ್ತ್ರೀಶಕ್ತಿ ಸಂಘಗಳನ್ನು ಹುಟ್ಟುಹಾಕಿ, ಮಹಿಳೆಯರಲ್ಲಿ ಆರ್ಥಿಕ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದ್ದರು. ಅದೇ ರೀತಿ ಈಗ ಗೃಹಲಕ್ಷ್ಮಿ ಸಂಘಗಳ ಮೂಲಕ ಕುಟುಂಬದ ಯಜಮಾನಿಯರಲ್ಲಿ ಆರ್ಥಿಕ ಬದಲಾವಣೆ ತರಬೇಕೆಂಬ ಉದ್ದೇಶದಿಂದ ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಸಂಘ ರಚಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.ರಾಜ್ಯದಲ್ಲಿ ಗೃಹಲಕ್ಷ್ಮಿ ಸಂಘಗಳನ್ನು ಆಯ್ದ ನಾಲ್ಕೈದು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲು ಉದ್ದೇಶ ಹೊಂದಲಾಗಿದೆ. ನಂತರದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನಗರ- ಗ್ರಾಮೀಣ ಪ್ರದೇಶಗಳಲ್ಲಿ ಗೃಹಲಕ್ಷ್ಮೀ ಸಂಘಗಳನ್ನು ಅಸ್ತಿತ್ವಕ್ಕೆ ತರಲಾಗುವುದು ಎಂದು ಸಚಿವರು ಹೇಳಿದರು.
ರಾಜ್ಯದಲ್ಲಿ ಅಂಗನವಾಡಿಗಳು ಅಸ್ತಿತ್ವಕ್ಕೆ ಬಂದು ಐವತ್ತು ವರ್ಷಗಳಾಗಿವೆ. ಹಾಗಾಗಿ, ಇಲಾಖೆ ವತಿಯಿಂದ ‘ಅಂಗನವಾಡಿಗಳ ಸುವರ್ಣೋತ್ಸವ’ ವನ್ನು ಅಕ್ಟೋಬರ್ ತಿಂಗಳಿನಲ್ಲಿ ಆಚರಿಸಲು ಈಗಾಗಲೇ ತೀರ್ಮಾನಿಸಲಾಗಿದೆ. ಮೈಸೂರು ಅಥವಾ ಬೆಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಅದೇ ಸಂದರ್ಭದಲ್ಲಿ ಗೃಹಲಕ್ಷ್ಮಿ ಸಂಘಗಳನ್ನು ಉದ್ಘಾಟಿಸಲಾಗುವುದೆಂದು ಸಚಿವರು ತಿಳಿಸಿದರು.
ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಇಲಾಖೆಯ ಕಾರ್ಯದರ್ಶಿ ಡಾ.ಶಾಮ್ಲಾ ಇಕ್ಬಾಲ್, ಕೌಶಲ್ಯ ಅಭಿವೃದ್ಧಿ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕಿ ಶ್ರೀವಿದ್ಯಾ, ECDC ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ ದಿಲೀಶ್ ಸಸಿ, ಇಲಾಖೆಯ ನಿರ್ದೇಶಕ ಟಿ. ರಾಘವೇಂದ್ರ, ಸಚಿವರ ಆಪ್ತ ಕಾರ್ಯದರ್ಶಿ ಡಾ.ಟಿ.ಎಚ್.ವಿಶ್ವನಾಥ್, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಇಲಾಖೆಯ ಜಂಟಿ ನಿರ್ದೇಶಕ ಬಿ.ಎಚ್.ನಿಶ್ಚಲ್, ಇಲಾಖೆಯ ಜಂಟಿ ನಿರ್ದೇಶಕರು, ಉಪ ನಿರ್ದೇಶಕರು ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.