ಬೆಂಗಳೂರು : ಸಾಲದ ಹಣದ ಕಂತು ಪಡೆಯಲು ಹೋದ ಬ್ಯಾಂಕ್ ಸಿಬ್ಬಂದಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಆರೋಪ ಪ್ರಕರಣ ನಗರದಲ್ಲಿ ನಡೆದಿದೆ.
ನಾಗರಭಾವಿಯ 2ನೇ ಹಂತದಲ್ಲಿರುವ ಬಿಡಿಎ ಕಾಂಪ್ಲೆಕ್ಸ್ನಲ್ಲಿ ಏಪ್ರಿಲ್ 1ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬ್ಯಾಂಕ್ ಸಿಬ್ಬಂದಿ ಚಂದನ್ ಬಿ. ಎಂ. ಎಂಬಾತನ ಮೇಲೆ ಕಲ್ಲುಗಳಿಂದ ಮಾರಣಾಂತಿಕವಾಗಿ ಹಲ್ಲೆಗೈದು, ಜೀವಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ. ಹಲ್ಲೆಗೊಳಗಾದ ಚಂದನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ನೀಡಿರುವ ದೂರಿನನ್ವಯ ಏಪ್ರಿಲ್ 4ರಂದು ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವಿಚಕ್ರ ವಾಹನ ಖರೀದಿಸಲು ಖಾಸಗಿ ಬ್ಯಾಂಕ್‌ನ ಮೂಲಕ ಸಾಲ ಪಡೆದಿದ್ದ ರಮೇಶ್, ಎರಡು ತಿಂಗಳುಗಳಿಂದ ಇಎಂಐ ಪಾವತಿಸಿರಲಿಲ್ಲ. ಇಎಂಐ ಹಣ ವಸೂಲಿ ಮಾಡಲು ಬ್ಯಾಂಕ್‌ನ ಸಿಬ್ಬಂದಿ ಚಂದನ್ ರಮೇಶ್ ಮನೆ ಬಳಿ ತೆರಳಿದ್ದರು.ಈ ವೇಳೆ ‘ಹಣ ಪಾವತಿ ಮಾಡಲ್ಲ’ ಎಂದು ರಮೇಶ್ ಹೇಳಿದಾಗ, ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಅದೇ ಸಂದರ್ಭದಲ್ಲಿ ಕೈ ಮತ್ತು ಕಲ್ಲುಗಳಿಂದ ತನ್ನ ಮೇಲೆ ಹಲ್ಲೆ ನಡೆಸಿರುವ ರಮೇಶ್, ಜೀವಬೆದರಿಕೆ ಹಾಕಿದ್ದಾರೆ ಎಂದು ಚಂದನ್ ದೂರಿದ್ದಾರೆ. ದೂರಿನನ್ವಯ ರಮೇಶ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.