ಬೆಂಗಳೂರು : ಮಾಜಿ ಸಂಸದ ಡಿಕೆ ಸುರೇಶ್ ಅವರ ಪತ್ನಿ ಎಂದು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹರಿಬಿಟ್ಟ ಮಹಿಳೆಯ ವಿರುದ್ಧ ರಾಮನಗರ ಸೆನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪವಿತ್ರ ಎಂಬ ಮಹಿಳೆಯ ವಿರುದ್ಧ ಡಿಕೆ ಸುರೇಶ್ ಅವರ ವಕೀಲ ಪ್ರದೀಪ್ ದೂರು ದಾಖಲಿಸಿದ್ದಾರೆ.
ಏಪ್ರಿಲ್ 8, 2025 ರಂದು ಆರೋಪಿ ಮಹಿಳೆ, ಡಿಕೆ ಸುರೇಶ್ ಅವರ ಫೋಟೊದೊಂದಿಗೆ ತನ್ನ ಫೋಟೊವನ್ನು ಎಡಿಟ್ ಮಾಡಿ, ತಾನು ಅವರ ಪತ್ನಿ ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಕೃತ್ಯವನ್ನು ದುರುದ್ದೇಶದಿಂದ ಮಾಡಿ, ಡಿಕೆ ಸುರೇಶ್ ವಿರುದ್ಧ ಅಪಪ್ರಚಾರ ಮಾಡಲಾಗಿದೆ ಎಂದು ವಕೀಲ ಪ್ರದೀಪ್ ದೂರಿನಲ್ಲಿ ತಿಳಿಸಿದ್ದಾರೆ.ಈ ಸಂಬಂಧ ರಾಮನಗರ ಸೆನ್ ಪೊಲೀಸರು ಎಫ್‌ಐಆರ್ ದಾಖಲಿಸಿ, ತನಿಖೆ ಆರಂಭಿಸಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಮಹಿಳೆಯ ಕೃತ್ಯವನ್ನು ಖಂಡಿಸಲಾಗಿದೆ.
ವಿಡಿಯೋದಲ್ಲಿ ಏನಿದೆ?
ನಾನು ಮೊದಲು ಡಿ.ಕೆ. ಸುರೇಶ್ ಅವರ ಹೆಂಡತಿಯಾಗಿ ಹೇಳಬೇಕೆಂದರೆ, ನಾನು ಫಸ್ಟ್ ಸುರೇಶ್ ಅವರ ಅಭಿಮಾನಿ. ಯಾಕೆಂದರೆ ಅವರು ಮೂರು ಸಲ ಎಂ.ಪಿ.ಯಾಗಿ ಯಾರೂ ಮಾಡಲಿಕ್ಕಾಗದ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ.ಇಂತಹವರನ್ನು ನನ್ನ ಗಂಡ ಎಂದು ಹೇಳಿಕೊಳ್ಳಲು ಖುಷಿಪಡುತ್ತೇನೆ ಎಂದು ಆಕೆ ವಿಡಿಯೊದಲ್ಲಿ ಹೇಳಿದ್ದಾರೆ.
ನಾನು ಹಲವು ಸಭೆ ಸಮಾರಂಭಗಳಿಗೆ ಹೋಗುತ್ತಿರುತ್ತೇನೆ.ಆದರೆ ಸರಳವಾಗಿ ಹೋಗುವುದರಿಂದ ಎಲ್ಲರೂ ನನ್ನ ಪ್ರಶ್ನೆ ಮಾಡುತ್ತಾರೆ, ನೀವು ಡಿ.ಕೆ ಸುರೇಶ್ ಪತ್ನಿ ಅಲ್ಲವೇ, ಏಕೆ ಇಷ್ಟೊಂದು ಸಿಂಪಲ್ ಆಗಿ ಬಂದಿದ್ದೀರಾ ಎಂದು ಕೇಳುತ್ತಾರೆ, ಜನರಿಗೆ ಸ್ಟೇಟಸ್ ಬೇಕು, ಹಾಗಾಗಿ ನಾನು ರಾಯಲ್ ಆಗಿ ಇರಲು ಬಯಸುತ್ತೇನೆ ಎಂದು ವಿಡಿಯೋ ಮಾಡಿ ಫೇಸ್ ಬುಕ್ ನಲ್ಲಿ ಹರಿ ಬಿಟ್ಟಿದ್ದಾರೆ.