ಇತ್ತೀಚಿನ ದಿನಗಳಲ್ಲಿ ಅಡಿಕೆಗೆ ಕೆಂಪು ಮೂತಿ ಹುಳು ಸೊರಬ ಮತ್ತು ಸಾಗರ ಭಾಗದ ಅಡಿಕೆ ತೋಟಗಳಲ್ಲಿ ಹೆಚ್ಚಾಗಿ ಕಾಣಿಸುತ್ತಿದ್ದು, ರೈತರಿಗೆ ಸಮಸ್ಯೆಯಾಗಿದೆ. ಇವುಗಳ ನಿರ್ವಹಣಾ ಕ್ರಮಗಳ ಮಾಹಿತಿಯನ್ನು ಡಾ.ನಾಗರಾಜಪ್ಪ ಅಡಿವಪ್ಪರ್, ಮುಖ್ಯಸ್ಥರು, ಅಡಿಕೆ ಸಂಶೋಧನಾ ಕೇಂದ್ರ, ನವಿಲೆ, ಶಿವಮೊಗ್ಗ ಇವರು ತಿಳಿಸಿರುತ್ತಾರೆ.
4 ರಿಂದ 5 ವರ್ಷದ ತೋಟದಲ್ಲಿ ಇದರ ಬಾಧೆ ಹೆಚ್ಚಾಗಿದ್ದು, ಗರಿಗಳು ಹಳದಿಯಾಗಿ ಬಾಡಿದಂತೆ ಕಾಣಿಸುತ್ತದೆ. ಕಾಂಡದ ಭಾಗದಲ್ಲಿ ರಂಧ್ರಗಳಾಗಿ ಕಂದು ಬಣ್ಣದ ರಸ ಸೋರುತ್ತದೆ. ತೀವ್ರ ಹಾನಿಗೊಳಗಾದ ಮರಗಳಲ್ಲಿ ಕಾಂಡದ ಭಾಗದಲ್ಲಿ ನಾರಿನ ಅಂಶ ಹೊರಬರುತ್ತದೆ. ಹಾನಿಗೊಳಗಾದ ಮರಗಳನ್ನು ಸೀಳಿ ನೋಡಿದಾಗ ವಿವಿಧ ಹಂತದ ಹುಳುಗಳನ್ನು ಕಾಣಬಹುದು. ಇದರಿಂದ ಬೆಳವಣಿಗೆ ಕುಂಠಿತವಾಗುತ್ತದೆ. ತೀವ್ರಹಾನಿಗೊಳಗಾದ ಮರಗಳು ಗಾಳಿ, ಮಳೆಗೆ ಬೀಳುತ್ತವೆ.
ನಿರ್ವಹಣಾ ಕ್ರಮಗಳು:
ಹುಳುವಿನ ಕಡೆ ಒಂದು ರಂಧ್ರವನ್ನು ಮಾಡಿ ಅದಕ್ಕೆ 4 ಮಿ.ಲೀ ಕ್ಲೊರಾಂಟ್ರಿನಿಲಿಪ್ರೋಲ್ 18.5 ಎಸ್.ಸಿ ಅಥವಾ 4 ಮಿ.ಲೀ ಇಂಡಾಕ್ಸಾಕಾರ್ಬ 14.5 ಎಸ್.ಸಿ ನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸುರಿಯಬೇಕು ಮತ್ತು ಸುಳಿಯಲ್ಲಿರುವ ರಂಧ್ರದಲ್ಲಿಯೂ ಕೂಡ ಸುರಿಯಬೇಕು. ಶೇ.5 ರ ಮೆಲಾಥಿಯಾನ್ ಪುಡಿ ಹಾಗೂ ಮರಳು ಸಮಪ್ರಮಾಣದಲ್ಲಿ ಬೆರೆಸಿ ಏಪ್ರಿಲ್ – ಮೇ ಹಾಗೂ ಸೆಪ್ಟೆಂಬರ್–ಅಕ್ಟೋಬರ್ ತಿಂಗಳುಗಳಲ್ಲಿ ಎಲೆಯ ಸಂದುಗಳಲ್ಲಿ ಹಾಕಬೇಕು. ಯಾವುದೇ ಮರಗಳ ಕಾಂಡದಲ್ಲಿ ಗಾಯಗಳಾಗದಂತೆ ಎಚ್ಚರವಹಿಸಬೇಕು. ಗಾಯಗಳಾಗಿದ್ದಲ್ಲಿ 5.0 ಮಿ.ಲೀ ಕ್ಲೋರೋಫೈರಿಫಾಸ್ 20 ಇ.ಸಿ ಸಂದುಗಳಲ್ಲಿ ಹಾಕಿ ಮಣ್ಣಿನ ಮಿಶ್ರಣದಿಂದ ಮುಚ್ಚಬೇಕು. ಕ್ಲೊರಾಂಟ್ರಿನಿಲಿಪ್ರೊಲ್ 18.5 ಎಸ್.ಸಿ (2 ಮಿ.ಲೀ + 500 ಮಿ.ಲೀ ನೀರು) ಅಥವಾ ಇಂಡಾಕ್ಸಾಕಾರ್ಬ 77.78 ಎಸ್.ಸಿ (2 ಮಿ.ಲೀ + 500 ಮಿ.ಲೀ ನೀರು) ಬೇರುಗಳ ಮುಖಾಂತರ ಕೊಡಬೇಕು. ಪ್ರತಿ ಹೆಕ್ಟೇರ್‌ಗೆ ಒಂದರಂತೆ ಮೋಹಕ ಬಲೆಯನ್ನು ಇಡಬೇಕು ಮತ್ತು 6 ತಿಂಗಳಿಗೊಮ್ಮೆ ಲ್ಯೂರ್‌ನ್ನು ಬದಲಾಯಿಸಬೇಕು.