ಕೊಪ್ಪಳ : ಪೊಲೀಸರ ಸೋಗಿನಲ್ಲಿ ಬಂದ ವಂಚಕರನ್ನು ಅರಿಯದೇ ಮಹಿಳೆಯೊಬ್ಬರು ಚಿನ್ನಾಭರಣ ಕಳೆದುಕೊಂಡ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದಲ್ಲಿ ನಡೆದಿದೆ. ಬಂಗಾರದ ಚೈನ್ ಅನ್ನು ಭದ್ರವಾಗಿ ಕಟ್ಟಿಕೊಡುತ್ತೇವೆಂದು ಮಹಿಳೆಗೆ ಕಲ್ಲು ಕಟ್ಟಿಕೊಟ್ಟು ಯಾಮಾರಿಸಲಾಗಿದೆ.ಮಹಿಳೆ ಕೂಡಲೇ ಕುಕನೂರು ಪೋಲಿಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ಹೌದು ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದ ನಿವಾಸಿ ಸುಮಾ ಅಲಬೂರ ಎಂಬವರ ಒಂದೂವರೆ ತೊಲೆಯ ಬಂಗಾರದ ಸರವನ್ನು ಪೊಲೀಸರ ಸೋಗಿನಲ್ಲಿ ಕಳ್ಳರು ಕದ್ದು ಪರಾರಿಯಾಗಿದ್ದಾರೆ.ಇಬ್ಬರು ಬಂದು, ತಾವು ಪೊಲೀಸ್ ಎಂದು ಹೇಳಿಕೊಂಡು ಪರಿಚಯ ಮಾಡಿಕೊಂಡಿದ್ದಾರೆ. ಪಟ್ಟಣದಲ್ಲಿ ಕಳ್ಳತನದ ಹಾವಳಿ ಹೆಚ್ಚಾಗಿದೆ. ಆಭರಣ ಮೈಮೇಲೆ ಧರಿಸಿ ಓಡಾಡಬೇಡಿ. ಹೀಗೆ ಓಡಾಡಿದರೆ ಯಾರಾದರೂ ಕಳ್ಳರು ಕದ್ದು ಪರಾರಿಯಾಗುತ್ತಾರೆ ಎಂದು ಹೇಳಿದ್ದಾರೆ.
ಈ ವೇಳೆ ಮಹಿಳೆ ಇಬ್ಬರೂ ಕಳ್ಳರ ಮೈ ಮೇಲೆ ಪೊಲೀಸ್ ಸಮವಸ್ತ್ರ ಇಲ್ಲದಿರುವುದನ್ನು ನೋಡಿ ಪ್ರಶ್ನಿಸಿದ್ದಾಳೆ. ಆಗ ಸಮವಸ್ತ್ರದಲ್ಲಿ ಬಂದರೆ ಕಳ್ಳರು ಸಿಗಲ್ಲ ಎಂದು ಮಹಿಳೆಗೆ ತಿಳಿಸಿದ್ದಾರೆ.ಪಕ್ಕದಲ್ಲಿದ್ದ ಇನ್ನೊಬ್ಬ ವ್ಯಕ್ತಿಗೆ ಇದೇ ರೀತಿ ಹೇಳಿ ಆತ ಬಿಚ್ಚಿಕೊಟ್ಟ ಉಂಗುರವನ್ನು ಪೇಪರ್ ಹಾಳೆಯಲ್ಲಿ ಸುತ್ತಿ ಮರಳಿ ಕೊಟ್ಟಿದ್ದಾರೆ.ಬಳಿಕ ಸುಮಾ ಅವರ ಕೊರಳಲ್ಲಿದ್ದ ಬಂಗಾರದ ಸರವನ್ನು ಅವರಿಂದ ಪಡೆದು, ಪೇಪರ್ ಹಾಳೆಯಲ್ಲಿ ಮಡಚಿಕೊಡುವುದಾಗಿ ನಂಬಿಸಿ ಕಲ್ಲು ಸುತ್ತಿದ ಹಾಳೆಯ ಕವರ್ ನೀಡಿ ಮನೆಯಲ್ಲಿ ಭದ್ರವಾಗಿ ಇರಿಸುವಂತೆ ಹೇಳಿ ಸರ ಕದ್ದು ಪರಾರಿಯಾಗಿದ್ದಾರೆ.