ಬೆಂಗಳೂರು: ಇನ್ಮುಂದೆ ಸರ್ಕಾರಿ ಶಾಲೆಗಳ ಶಿಕ್ಷಕರು ಮತ್ತು ಸಿಬ್ಬಂದಿಗಳು ನಾನಾ ನೆಪಗಳನ್ನು ಹೇಳಿ ತಡವಾಗಿ ಶಾಲೆಗೆ ಬರುವಂತಿಲ್ಲ, ಹಾಗೆಯೇ ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಿ ಎಲ್ಲೆಂದರಲ್ಲಿ ಸುತ್ತಾಡುವ ಆಟ ಇನ್ನು ನಡೆಯುವುದಿಲ್ಲ. ಕರ್ತವ್ಯದ ಅವಧಿಯಲ್ಲಿ ಶಾಲೆಗೆ ಚಕ್ಕರ್ ಹೊಡೆಯುವ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಬಿಗ್ ಶಾಕ್ ನೀಡಿದೆ.
ರಾಜ್ಯ ಶಿಕ್ಷಣ ಇಲಾಖೆಯು ಪ್ರಸಕ್ತ ಸಾಲಿನಿಂದ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ತಂತ್ರಜ್ಞಾನ ಆಧಾರಿತ ಕಡ್ಡಾಯ ಹಾಜರಾತಿ ನಿಯಮವನ್ನು ಜಾರಿಗೆ ತಂದಿದೆ. ಇನ್ಮುಂದೆ ಶಿಕ್ಷಕರು ಶಾಲೆಗೆ ಬಂದು ತಮ್ಮ ಮುಖದ ಗುರುತು (Face Recognition) ಹಾಗೂ ಲೊಕೇಶನ್ (Location) ಆಧರಿಸಿ ಅಟೆಂಡೆನ್ಸ್ ಹಾಕಬೇಕಾಗುತ್ತದೆ. ಇದಕ್ಕಾಗಿ ಇಲಾಖೆಯು ‘ಕರ್ನಾಟಕ ಅಡ್ವಾನ್ಸ್ ಅಟೆಂಡೆನ್ಸ್ ಮ್ಯಾನೇಜ್ಮೆಂಟ್ ಸಿಸ್ಟಮ್’ (KAAMS – ಕೆಎಎಎಂಎಸ್) ಎಂಬ ವಿಶೇಷ ಆಪ್ ರೂಪಿಸಿದೆ.
ಕಳೆದ ಶುಕ್ರವಾರದಿಂದಲೇ ಈ ನೂತನ ತಂತ್ರಜ್ಞಾನ ರಾಜ್ಯಾದ್ಯಂತ ಅನುಷ್ಠಾನಕ್ಕೆ ಬಂದಿದ್ದು, ಶಿಕ್ಷಕರು ದಿನಕ್ಕೆ ಎರಡು ಬಾರಿ ಕಡ್ಡಾಯವಾಗಿ ಆಪ್ ಮೂಲಕವೇ ಹಾಜರಾತಿ ದಾಖಲಿಸಬೇಕಿದೆ. ನಿಗದಿತ ಸಮಯಕ್ಕಿಂತ ತಡವಾಗಿ ಬಂದರೆ ಆ ದಿನವನ್ನು ಆಕಸ್ಮಿಕ ರಜೆ (CL) ಎಂದು ಪರಿಗಣಿಸಲಾಗುತ್ತದೆ. ಸರ್ಕಾರದ ಈ ಕಟ್ಟುನಿಟ್ಟಿನ ಕ್ರಮವನ್ನು ಪೋಷಕರು ಮತ್ತು ಸಾರ್ವಜನಿಕ ವಲಯ ಮುಕ್ತಕಂಠದಿಂದ ಸ್ವಾಗತಿಸಿದೆ. ಇದರ ಬೆನ್ನಲ್ಲೇ ಮುಂಬರುವ ಒಂದೂವರೆ ತಿಂಗಳಲ್ಲಿ ವಿದ್ಯಾರ್ಥಿಗಳಿಗೂ ಎಐ (AI) ಆಧಾರಿತ ಹಾಜರಾತಿ ತರಲು ಸರ್ಕಾರ ಸಜ್ಜಾಗಿದೆ.
ಶಾಲೆಗೆ ಬೇಗ ಬರುವುದು ಮಾತ್ರವಲ್ಲ, ಅವಧಿಗೂ ಮುನ್ನವೇ ಲಾಗ್ ಔಟ್ ಮಾಡಿ ಮನೆಗೆ ಹೊರಟರೂ ಶಿಕ್ಷಕರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಶಾಲಾ ಸಮಯ ಮುಗಿಯುವ ಮುನ್ನವೇ ಲಾಗ್ಔಟ್ ಆಗುವುದನ್ನು ‘ಅವಧಿಗೂ ಮುನ್ನ ನಿರ್ಗಮನ’ (Early Departure) ಎಂದು ಪರಿಗಣಿಸಿ, ಅದನ್ನು ಕರ್ತವ್ಯ ಲೋಪ ಎಂದು ತೀರ್ಮಾನಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ಅರ್ಧ ದಿನದ ರಜೆ ಕತ್ತರಿ ಬೀಳಲಿದೆ. ಯಾವುದೇ ಮುನ್ಸೂಚನೆ ಇಲ್ಲದೆ ಮಧ್ಯಾಹ್ನದ ವೇಳೆಗೆ ಚೆಕ್ ಔಟ್ ಆದಲ್ಲಿ, ಆ ದಿನದ ದ್ವಿತೀಯಾರ್ಧವನ್ನು ಅರ್ಧ ದಿನದ ಆಕಸ್ಮಿಕ ರಜೆ (CL) ಎಂದು ದಾಖಲಿಸಲಾಗುತ್ತದೆ. ಒಂದು ವೇಳೆ ಶಿಕ್ಷಕರ ಖಾತೆಯಲ್ಲಿ ಸಿಎಲ್ ಬಾಕಿ ಇಲ್ಲದಿದ್ದರೆ, ಅದನ್ನು ಗಳಿಕೆ ರಜೆ (EL) ಅಥವಾ ವೇತನ ರಹಿತ ರಜೆ (LWP) ಎಂದು ಕಟಾವಣೆ ಮಾಡಲಾಗುತ್ತದೆ.
ಒಂದು ತಿಂಗಳಿನಲ್ಲಿ ಮೂರು ಬಾರಿ ತಡವಾಗಿ ಬರುವುದು ಅಥವಾ ಬೇಗ ಮನೆಗೆ ಹೋಗುವುದು ಪತ್ತೆಯಾದರೆ, ನೇರವಾಗಿ ಒಂದು ದಿನದ ಆಕಸ್ಮಿಕ ರಜೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ನಿಯಮ ಮೀರಿ ಪದೇ ಪದೇ ಹೀಗೆ ಮಾಡಿದರೆ ಅದನ್ನು ‘ಅನಧಿಕೃತ ಗೈರುಹಾಜರಿ’ ಎಂದು ಪರಿಗಣಿಸಿ ಬಿಇಒ (BEO) ಅಥವಾ ಡಿಡಿಪಿಐ (DDPI) ಮಟ್ಟದಲ್ಲಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗುತ್ತದೆ.








