ಬೆಂಗಳೂರು : ಖಾಸಗಿ ಶಾಲೆಗಳಿಗೆ ಮಾನ್ಯತೆಯನ್ನು ನವೀಕರಿಸಲು ಕ್ರಮ ವಹಿಸುವಂತೆ ರಾಜ್ಯ ಶಿಕ್ಷಣ ಇಲಾಖೆ ಮಹತ್ವದ ಸುತ್ತೊಲೆ ಹೊರಡಿಸಿದ್ದು, ಎಲ್ಲಾ ಖಾಸಗಿ ಅನುದಾನಿತ/ಅನುದಾನರಹಿತ ಶಾಲೆಗಳು ನಿಗದಿತ ಅವಧಿಯಲ್ಲಿ ನಿಯಮಾನುಸಾರ ಎಲ್ಲಾ ಅಗತ್ಯ ಮಾಹಿತಿ/ದಾಖಲೆಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿ ಮಾನ್ಯತೆ ಪಡೆಯುವುದು ಕಡ್ಡಾಯವಾಗಿರುತ್ತದೆ.
ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಶಿಕ್ಷಣ ಕಾಯ್ದೆ-1983ರ ಸೆಕ್ಷನ್-36 ಮತ್ತು ಕರ್ನಾಟಕ ಶಿಕ್ಷಣ ಸಂಸ್ಥೆಗಳು (ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಾನ್ಯತೆ) ನಿಯಮಗಳು 1999ರ ನಿಯಮ-3ರಂತೆ ಹಾಗೂ ಉಲ್ಲೇಖ (2)ರ ಕಾಯ್ದೆಯ ಸೆಕ್ಷನ್-18 ಹಾಗೂ ಉಲ್ಲೇಖ (3)ರ ನಿಯಮ-11ರಂತೆ ಎಲ್ಲಾ ಖಾಸಗಿ ಅನುದಾನಿತ/ಅನುದಾನರಹಿತ ಶಾಲೆಗಳು ನಿಗದಿತ ಅವಧಿಯಲ್ಲಿ ನಿಯಮಾನುಸಾರ ಎಲ್ಲಾ ಅಗತ್ಯ ಮಾಹಿತಿ/ದಾಖಲೆಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿ ಮಾನ್ಯತೆ ಪಡೆಯುವುದು ಕಡ್ಡಾಯವಾಗಿರುತ್ತದೆ,
ಕರ್ನಾಟಕ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಅಧಿನಿಯಮ, 2012ರ ನಿಯಮ-11ರ ಉಪನಿಯಮ (6) ರಲ್ಲಿ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ-2009 ಯ ಸೆಕ್ಷನ್-18ರಂತೆ 5 ವರ್ಷಗಳ ಅವಧಿಗೆ ಮಾನ್ಯತೆ ನವೀಕರಿಸಲು ಆದೇಶಿಸಲಾಗಿರುತ್ತದೆ.
ಉಲ್ಲೇಖಿತ (3)ರನ್ವಯ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ನಿಯಮಗಳು-2012ರ ನಿಯಮ-11ರ ಉಪನಿಯಮ(6) ಕ್ಕೆ ತಿದ್ದುಪಡಿ ತಂದಿದ್ದು, ದಿನಾಂಕ:26-08-2024 ರಿಂದ ಅನ್ವಯಿಸುವಂತೆ ಜಾರಿಗೆ ತರಲಾಗಿದೆ. ಅದರಂತೆ ಖಾಸಗಿ ಅನುದಾನಿತ/ಅನುದಾನ ರಹಿತ ಶಾಲೆಗಳಿಗೆ ಮಾನ್ಯತೆ ನವೀಕರಣ ನೀಡುವ ಸಂದರ್ಭದಲ್ಲಿ ಈ ಕೆಳಕಂಡ ತಿದ್ದುಪಡಿ ನಿಯಮಗಳಂತೆ ಕ್ರಮವಹಿಸುವುದು.
ತಿದ್ದುಪಡಿ ಅಂಶಗಳು:-
1. ಕರ್ನಾಟಕ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ನಿಯಮಗಳು-2012ರ ನಿಯಮ 11ರ ಉಪನಿಯಮ (6)ರಲ್ಲಿ ಈ ಕೆಳಕಂಡಂತೆ ಅಂಶಗಳನ್ನು ತಿದ್ದುಪಡಿ ಮಾಡಲಾಗಿದೆ.
ಕರ್ನಾಟಕ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ನಿಯಮಗಳು-2012 ರಲ್ಲಿ, ನಿಯಮ-11ರ ಉಪನಿಯಮ (6)ರಲ್ಲಿ “ಮಾನ್ಯತೆ ಅವಧಿಯು 05 ವರ್ಷಗಳಾಗಿರುತ್ತದೆ” ಎಂಬುದರ ಬದಲಾಗಿ “ನಿಯಮ-12ರ ನಿಬಂಧನೆ/ಮಾನದಂಡಗಳಿಗೆ ಒಳಪಟ್ಟು ಮೊದಲ ಬಾರಿಗೆ ನವೀಕರಣವನ್ನು ಹತ್ತು ವರ್ಷಗಳ ಅವಧಿಗೆ ನೀಡತಕ್ಕದ್ದು ಮತ್ತು ಮುಂದಿನ ಬಾರಿ ಶಾಶ್ವತವಾಗಿ ಮಾನ್ಯತೆ ನವೀಕರಿಸತಕ್ಕದ್ದು” ಎಂದು ತಿದ್ದುಪಡಿ ತರಲಾಗಿದೆ.
ಉಳಿದಂತೆ ಉಲ್ಲೇಖಿತ (1) ರಿಂದ (3)ರವರೆಗಿನ ಎಲ್ಲಾ ಕಾಯ್ದೆ / ನಿಯಮಗಳು ಯಥಾವತ್ತಾಗಿದ್ದು, ಹಾಗೂ ಉಲ್ಲೇಖಿತ (4)ರಂತೆ ತಿದ್ದುಪಡಿ ಅಂಶಗಳನ್ನು ಪರಿಗಣಿಸಿ. 2024-25ನೇ ಸಾಲಿಗೆ ಖಾಸಗಿ ಶಾಲೆಗಳಿಗೆ ನಿಯಮಾನುಸಾರ ನಿಬಂಧನೆ/ಮಾನದಂಡಗಳನ್ನು ಪೂರೈಸಿದಲ್ಲಿ 10 ವರ್ಷಕ್ಕೆ ಮಾನ್ಯತೆ ನವೀಕರಣ ನೀಡುವ ಕುರಿತು ಸಕ್ಷಮ ಪ್ರಾಧಿಕಾರಿಗಳಾದ ಜಿಲ್ಲಾ ಉಪನಿರ್ದೇಶಕರು (ಆಡಳಿತ) ರವರು ಅಗತ್ಯ ಕ್ರಮವಹಿಸುವಂತೆ ತಿಳಿಸಿದೆ.