ಬೆಂಗಳೂರು : ಹೊಸ ವರ್ಷ ಸಮೀಪಿಸುತ್ತಿದ್ದಂತೆ ನಗರ ಪೊಲೀಸರು ಡ್ರಗ್ಸ್ ಪೆಡ್ಲರ್ಸ್ ವಿರುದ್ಧ ಸಮರ ಸಾರಿದ್ದಾರೆ. ಬ್ರೆಡ್ ಪ್ಯಾಕೆಟ್ನಲ್ಲಿ ಡ್ರಗ್ಸ್ ಅವಿತಿಟ್ಟು ಮುಂಬೈನಿಂದ ಬೆಂಗಳೂರಿಗೆ ಅಕ್ರಮವಾಗಿ ಸಾಗಿಸುತ್ತಿದ್ದ ವಿದೇಶಿ ಯುವತಿಯನ್ನು ಸಿಸಿಬಿ ಪೊಲೀಸರು ಬಂಧಿಸಿ, 1.20 ಕೋಟಿ ರೂ ಮೌಲ್ಯದ ಕೊಕೇನ್ ವಶಕ್ಕೆ ಪಡೆದಿದ್ದಾರೆ.
ನೈಜೀರಿಯಾ ಮೂಲದ ಒಲಾಜಿಡೆ ಎಸ್ತಾರ್ ಬಂಧಿತ ವಿದೇಶಿ ಪ್ರಜೆ. ಈಕೆಯಿಂದ 1.20 ಕೋಟಿ ಮೌಲ್ಯದ 121 ಗ್ರಾಂ ಕೊಕೇನ್ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಆರೋಪಿತೆಯ ವಿರುದ್ಧ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಕೊಂಡು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ಧಾರೆ.
ಬಂಧಿತ ಆರೋಪಿ ಮುಂಬೈಯಿಂದ ಬೆಂಗಳೂರಿಗೆ ಖಾಸಗಿ ಬಸ್‌ನಲ್ಲಿ ಕೊಕೇನ್ ಸಾಗಾಟ ಮಾಡುತ್ತಿದ್ದಳು. ಈ ವೇಳೆ ಸಿಸಿಬಿ ಪೊಲೀಸರು ದಾಳಿ ನಡೆಸಿ, 65 ಲಕ್ಷ ರೂ. ಮೌಲ್ಯದ 120 ಗ್ರಾಂ ಕೊಕೇನ್ ವಶಕ್ಕೆ ಪಡೆದಿದ್ದಾರೆ. ಯಾರಿಗೂ ಅನುಮಾನ ಬಾರದಂತೆ ಬ್ರೆಡ್‌ನ ಒಳಭಾಗದ ಪೀಸ್ ಕಟ್ ಮಾಡಿ, ಅದರೊಳಗೆ ಕೊಕೇಕ್ ಇಟ್ಟು ಡ್ರಗ್ ಸಾಗಾಟ ಮಾಡುತ್ತಿರುವುದಾಗಿ ತಿಳಿದುಬಂದಿದೆ. ಸದ್ಯ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.








