ಬೆಂಗಳೂರು : ರಾಜ್ಯದಲ್ಲಿ ಒಳ ಮೀಸಲಾತಿ ಅನುಷ್ಠಾನಗೊಳಿಸುವ ಕುರಿತು ನೂತನ ಕಾಯ್ದೆ ಜಾರಿ ಸಂಬಂಧ ಕರಡು ನಿಯಮಗಳಿಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅಂಗೀಕಾರ ಪಡೆಯಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ ಪಾಟೀಲ್ ಹೇಳಿದ್ದಾರೆ.
ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಳಮೀಸಲಾತಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಸಮಾಜ ಕಲ್ಯಾಣ ಸಚಿವರು ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಜತೆಗೂಡಿ ಚರ್ಚಿಸಿ ಗುರುವಾರದ ಸಂಪುಟ ಸಭೆಯಲ್ಲಿ ಕರಡು ಮಂಡಿಸಲು ನಿರ್ಧರಿಸಲಾಗಿತ್ತು. ಆದರೆ ಬುಧವಾರ ಸಭೆ ನಡೆಸಲು ಸಾಧ್ಯವಾಗಲಿಲ್ಲ.
ಹೀಗಾಗಿ ವಿಷಯ ಮುಂದೂಡಲಾಗಿದೆ’ ಎಂದು ಹೇಳಿದರು. ಮುಂದಿನ ಸಂಪುಟ ಸಭೆ ವೇಳೆಗೆ ಕರಡು ನಿಯಮಗಳನ್ನು ಸಿದ್ಧಪಡಿಸಿ ಮಂಡಿಸಿ ಅಂಗೀಕಾರ ಪಡೆಯಲಾಗುವುದು. ಬಳಿಕ ಕಾಯ್ದೆ ಜಾರಿ ಮಾಡಲಾಗುವುದು ಎಂದರು. ಬೆಳಗಾವಿ ಚಳಿಗಾಲದ ಅಧಿವೇಶನ ದಿನಾಂಕ ನಿಗದಿ ಕುರಿತ ಪ್ರಶ್ನೆಗೆ, ಅಧಿವೇಶನ ದಿನಾಂಕ ಇನ್ನೂ ನಿಗದಿ ಮಾಡಿಲ್ಲ ಎಂದಷ್ಟೇ ಹೇಳಿದರು.
 
		



 




