ಬೆಂಗಳೂರು : ಬೆಂಗಳೂರು ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಸಾಕಷ್ಟು ಸ್ಟಾರ್ ಕಲಾವಿದರು ಗೈರಾಗಿದ್ದರು. ಇದು ಡಿಕೆ ಶಿವಕುಮಾರ್ ಸಿಟ್ಟಿಗೆ ಕಾರಣವಾಗಿತ್ತು. ಇದೇ ಸಂದರ್ಭದಲ್ಲಿ ಅವರು ಮೇಕೆದಾಟು ಹೋರಾಟ, ಕನ್ನಡ ಪರ ಹೋರಾಟದಲ್ಲೂ ಕಲಾವಿದರು ಪಾಲ್ಗೊಳ್ಳಲ್ಲ ಎಂದು ಗರಂ ಆಗಿ ಹೇಳಿದ್ದರು. ಅಲ್ಲದೆ ಎಲ್ಲರ ನಟ್ಟು ಬೋಲ್ಟ್ ಸರಿ ಮಾಡ್ತೀನಿ ಎಂದಿದ್ದರು.
ಡಿಕೆ ಶಿವಕುಮಾರ್ ಅವರ ಹೇಳಿಕೆಯನ್ನು ನಟಿ ರಮ್ಯಾ ಅವರು ಇದೀಗ ಸಮರ್ಥನೆ ಮಾಡಿಕೊಂಡಿದ್ದಾರೆ. ನೆಲ, ಜಲ, ಭಾಷೆ ವಿಚಾರದಲ್ಲಿ ಎಲ್ಲರೂ ಒಂದಾಗಬೇಕು.ನನಗನಿಸುವ ಪ್ರಕಾರ ಸಾಹೇಬ್ರು ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ. ನೀವು ಡಾ. ರಾಜ್ ಕುಮಾರ್ ಅವರನ್ನೇ ನೋಡಿ. ಕನ್ನಡ ಪರ ಹೋರಾಟ ಅಂದಾಗ ಮುಂಚೂಣಿಯಲ್ಲಿರುತ್ತಿದ್ದರು. ಅದೇ ರೀತಿ ಈಗಿನ ನಟರು ಇರಬೇಕು ಎಂದು ಹೇಳಿರಬಹುದು ಅದು ನಮ್ಮ ಕರ್ತವ್ಯ ಎಂದು ತಿಳಿಸಿದರು.
ಉತ್ತರ ಕರ್ನಾಟಕದ ನದಿಗಳು, ಜಲಾಶಯಗಳ ಬಗ್ಗೆಯೂ ಕಲಾವಿದರು ಮಾತನಾಡಬೇಕು, ನಮಗೆ ಒಂದು ಜವಾಬ್ದಾರಿ ಇರುತ್ತದೆ ಎಂದು ಓರ್ವ ನಟಿಯಾಗಿ ನಾನು ಭಾವಿಸುತ್ತೇನೆ. ನಮ್ಮ ಭಾಷೆ, ಜಾಗ, ಸಂಸ್ಕೃತಿಗೆ ನಾವು ಯಾವಾಗಲೂ ಬೆಂಬಲ ನೀಡಬೇಕು. ಹಾಗಾಗಿ ಡಿಕೆ ಶಿವಕುಮಾರ್ ಅವರು ಹೇಳಿದ್ದರಲ್ಲಿ ನನಗೆ ಏನೂ ತಪ್ಪು ಎನಿಸಲಿಲ್ಲ ಎಂದು ರಮ್ಯಾ ಅವರು ಹೇಳಿದ್ದಾರೆ.