ಬೆಂಗಳೂರು : ಇಡೀ ರಾಜ್ಯವೇ ಬೆಚ್ಚಿ ಬೀಳಿಸುವಂತೆ ಬೆಂಗಳೂರಿನ ಡಿ.ಜೆ. ಹಳ್ಳಿ, ಕೆ.ಜಿ.ಹಳ್ಳಿಯಲ್ಲಿ 2020ರಲ್ಲಿ ನಡೆದಿದ್ದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಕೋರ್ಟ್ ಶಿಕ್ಷೆ ವಿಧಿಸಿದೆ. ಗಲಭೆ ಸಂಬಂಧ ತಪ್ಪೊಪ್ಪಿಕೊಂಡಿದ್ದ ಮೂವರು ಆರೋಪಿಗಳಿಗೆ ಕಠಿಣ ಶಿಕ್ಷೆ ಜೊತೆಗೆ ದಂಡ ವಿಧಿಸಿ NIA ವಿಶೇಷ ಕೋರ್ಟ್ ಆದೇಶ ಹೊರಡಿಸಿದೆ.
ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ ಗಲಭೆ ತಪ್ಪೊಪ್ಪಿಕೊಂಡ ಮೂವರು ಆರೋಪಿಗಳಾದ ಎ-14 ಸೈಯದ್ ಇಕ್ರಮುದ್ದೀನ್ ಅಲಿಯಾಸ್ ನವೀದ್, ಎ-16 ಸೈಯದ್ ಆಸಿಫ್, ಎ-18 ಮೊಹಮ್ಮದ್ ಅತೀಫ್ ಗೆ 7 ವರ್ಷ ಕಠಿಣ ಶಿಕ್ಷೆ ಹಾಗೂ ತಲಾ 46 ಸಾವಿರ ರೂಪಾಯಿ ದಂಡ ವಿಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.
ಏನಿದು ಡಿಜೆ ಹಳ್ಳಿ ಗಲಭೆ ಪ್ರಕರಣ?
ಪ್ರವಾದಿ ಮಹಮ್ಮದ್ ಪೈಗಂಬರ್ ಅವರನ್ನು ನಿಂದನೆ ಮಾಡಲಾಗಿದೆ ಎಂದು ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿಯಲ್ಲಿ ಗಲಭೆ ನಡೆದಿತ್ತು. ಸಾಮಾಜಿಕ ಜಾಲಾತಾಣ ಫೇಸ್‌ಬುಕ್‌ನಲ್ಲಿ ವಿವಾದಾತ್ಮಕ ಅಂಶ ಹಂಚಿಕೊಂಡ ಆರೋಪದಿಂದ ಎರಡು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಗಲಭೆಗೆ ಕಾರಣವಾಗಿತ್ತು. ಅಂದಿನ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಸಂಬಂಧಿ ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿ ಅವರ ಮನೆಗೆ ಬೆಂಕಿ ಹಚ್ಚಿದ್ದಲ್ಲದೇ ಮನೆಯಲ್ಲಿದ್ದ ಎಲ್ಲ ವಸ್ತುಗಳನ್ನು ನಾಶ ಪಡಿಸಿದ್ದರು. ಈ ಸಂದರ್ಭದಲ್ಲಿ ಗಲಭೆ ನಿಯಂತ್ರಣ ಮಾಡಲು ಪೊಲೀಸರು ಗೊಲಿಬಾರ್ ನಡೆಸಿದ್ದರು.