ಬೆಂಗಳೂರು : ಗ್ರಾಮ ಲೆಕ್ಕಿಗರಿಂದ (ವಿ.ಎ.) ಸಚಿವರವರೆಗೆ ಕಾಗದರಹಿತ ವ್ಯವಹಾರಕ್ಕಾಗಿ ಇ-ಕಚೇರಿ ಕಡ್ಡಾಯಗೊಳಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಹಳ ದಿನಗಳಿಂದ ವಿ.ಎ.ಗಳಿಗೆ ಸ್ವಂತ ಕಚೇರಿ ಇರಲಿಲ್ಲ. ಹೀಗಾಗಿ ಜನರಿಗೆ ವಿ.ಎ. ಸಿಗುತ್ತಿರಲಿಲ್ಲ. ಕಚೇರಿ ಇಲ್ಲದ ವಿ.ಎ.ಗಳಿಗೆ ಗ್ರಾಮ ಪಂಚಾಯತಿಯಲ್ಲೇ ಕೊಠಡಿ ಮಾಡಲು ತೀರ್ಮಾನಿಸಲಾಗಿದೆ. ಒಟ್ಟು 8,357 ವಿ.ಎ.ಗಳ ಪೈಕಿ 7,405 ವಿ.ಎ.ಗಳಿಗೆ ಕಚೇರಿ ಸೌಲಭ್ಯ ಮಾಡಿಕೊಟ್ಟಿದ್ದೇವೆ. ಇನ್ನೂ 952 ವಿ.ಎ.ಗಳಿಗೆ ಕಚೇರಿ ಆಗಬೇಕಿದ್ದು, ಪ್ರಕ್ರಿಯೆ ನಡೆಯುತ್ತಿದೆ ಎಂದರು.
ಎಲ್ಲ ಗ್ರಾಮ ಲೆಕ್ಕಿಗರ ಕಚೇರಿಯಲ್ಲಿ ಇ-ಕಚೇರಿ ಅಳವಡಿಸಲು ತೀರ್ಮಾನಿಸಲಾಗಿದೆ. ನಾಲ್ಕು ತಿಂಗಳಲ್ಲಿ ಎಲ್ಲ ವಿ.ಎ.ಗಳಿಗೆ ಲ್ಯಾಪ್ಟಾಪ್ ಕೊಡುತ್ತೇವೆ. ಈಗಾಗಲೇ ಸುಮಾರು 4,000 ಲ್ಯಾಪ್ಟಾಪ್ಗಳನ್ನು ಕೊಟ್ಟಿದ್ದೇವೆ. ವಿ.ಎ.ಗಳಿಂದ ಹಿಡಿದು ಸಚಿವರವರೆಗೆ ಇ-ಕಚೇರಿ ಕಡ್ಡಾಯವಾಗಿ ಬಳಕೆ ಮಾಡಲು ತೀರ್ಮಾನಿಸಲಾಗಿದೆ. ಕಾಗದರಹಿತ ವಹಿವಾಟಿಗಾಗಿ ಒಂದು ತಿಂಗಳಲ್ಲಿ ಕಡ್ಡಾಯವಾಗಿ ಇ-ಕಚೇರಿ ಅಳವಡಿಕೆಗೆ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.