ಬೆಂಗಳೂರು : ಬೆಂಗಳೂರಲ್ಲಿ ಪುಂಡರ ಅಟ್ಟಹಾಸ ಮಿತಿ ಮೀರಿದ್ದು, ಮಾದಕದ ಅಮಲಿನಲ್ಲಿದ್ದ ಪುಂಡರ ಗುಂಪೊಂದು ಸಾರ್ವಜನಿಕರ ಮೇಲೆ ಮಾರಕಾಸ್ತ್ರ ಬೀಸಿ ಹಣ ಹಾಗೂ ಮೊಬೈಲ್ ದೋಚಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮೇ 5 ರಂದು ಜೆ.ಜೆ ನಗರ ವ್ಯಾಪ್ತಿಯಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಾರಕ ಆಯುಧಗಳನ್ನ ಹಿಡಿದು ಎಂಟ್ರಿ ಕೊಟ್ಟ ಐದಾರು ಯುವಕರ ಗುಂಪೊಂದು ದಾರಿಯಲ್ಲಿ ಹೋಗುತ್ತಿದ್ದವರನ್ನು ಅಡ್ಡಗಟ್ಟಿ ಮನಬಂದಂತೆ ಹಲ್ಲೆ ನಡೆಸಿದೆ. ಮಾದಕ ಪದಾರ್ಥಗಳನ್ನ ಸೇವಿಸಿ ಕಿಕ್ಕೇರಿಸಿಕೊಂಡಿದ್ದ ಆರೋಪಿಗಳು, ಸಾರ್ವಜನಿಕರಿಂದ ಬಲವಂತವಾಗಿ ಮೊಬೈಲ್ ಫೋನ್‌ಗಳು, ಹಣವನ್ನು ಕಿತ್ತುಕೊಂಡಿದ್ದಾರೆ.
ಪುಂಡರು ಮಾರಕಾಸ್ತ್ರ ಬೀಸುತ್ತಿರುವ ದೃಶ್ಯಗಳು ಸ್ಥಳೀಯ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ ಜೆ.ಜೆ ನಗರ ಠಾಣೆ ಪೊಲೀಸರು ಓರ್ವ ಅಪ್ರಾಪ್ತ ಸೇರಿದಂತೆ ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ. ಆದರೆ, ಘಟನೆ ನಡೆದು ಹಲವು ದಿನಗಳಾದರೂ ಪೊಲೀಸರು ಕೇವಲ ಒಬ್ಬಿಬ್ಬರನ್ನು ಬಂಧಿಸಿ ಕೈತೊಳೆದುಕೊಂಡಿದ್ದಾರೆ.








