ಬೆಂಗಳೂರು : ಸಿಲಿಂಡರ್ ಸ್ಫೋಟದಲ್ಲಿ ಹಾನಿಗೀಡಾಗಿರುವ ಮನೆಗಳನ್ನು ಕೂಡಲೇ ದುರಸ್ತಿ ಮಾಡಿಕೊಡುವಂತೆ ಬಿಬಿಎಂಪಿ ಆಯುಕ್ತರಿಗೆ ಸೂಚಿಸಲಾಗಿದೆ. ಒಂಭತ್ತು ಜನ ಗಾಯಾಳುಗಳಾಗಿದ್ದು ಒಂದು ಸಾವು ಸಂಭವಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಇಂದು ಆಡುಗೋಡಿ ಬಳಿಯ ಚಿನ್ನಯ್ಯನ ಪಾಳ್ಯ ದಲ್ಲಿ ಸಂಭವಿಸಿದ ಸಿಲಿಂಡರ್ ಸ್ಫೋಟದ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದರು.
ದುರದೃಷ್ಟಕರ ಘಟನೆ ನಡೆದಿದೆ. ಮೇಲ್ನೋಟಕ್ಕೆ ಸಿಲಿಂಡರ್ ಸ್ಫೋಟವಾಗಿರಬಹುದು ಎಂದು ಕಂಡು ಬಂದಿದೆ. ಪೊಲೀಸರು ಹಾಗೂ ಬಿಬಿಎಂಪಿಯವರ ವರದಿಯೂ ಕೂಡ ಅದೇ ಹೇಳಿದೆ. ಇಲ್ಲಿನ ಜನ ಸಣ್ಣ ಸಣ್ಣ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಕಸ್ತೂರಮ್ಮ ಅವರಿಗೆ ಸುತ್ತ ಗಾಯಗಳಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ನರಸಮ್ಮ, ಫಾತಿಮಾ, 38 ವರ್ಷದ ಪ್ರಮೀಳಾ,ರಾಜೇಶ್ (40 ವರ್ಷ), ಸಂಜಯ ಗಾಂಧಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಮುಬಾರಕ್ ಎಂಬುವರು ತೀರಿಕೊಂಡಿದ್ದಾರೆ. ಸಬ್ರಿನಾ ಬಾನು, ಕಯಾಲಾ, ಇಂದಿರಾಗಾಂಧಿ ಆಸ್ಪತ್ರೆಯಲ್ಲಿದ್ದು, ಸುಬ್ರಮಣಿ (62 ವರ್ಷ) ಅಗಡಿ ಆಸ್ಪತ್ರೆ, ಶೇಖಾ, ನಜೀದುಲ್ಲಾ,(37 ವರ್ಷ) ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮುಖ್ಯಮಂತ್ರಿಗಳು ವಿವರಿಸಿದರು.
ಸಿಲಿಂಡರ್ ಸ್ಪೋಟ: ಮೃತರ ಕುಟುಂಬಕ್ಕೆ 5 ಲಕ್ಷ ರೂ.ಗಳ ಪರಿಹಾರ
ಮುಬಾರಕ್ ಅವರ ಕುಟುಂಬದವರಿಗೆ 5 ಲಕ್ಷ ರೂ.ಗಳ ಪರಿಹಾರವನ್ನು ನೀಡಲಾಗಿದೆ. ಗಾಯಾಳುಗಳಿಗೆ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಸುತ್ತ ಗಾಯಗಳಾಗಿರುವ ಕಸ್ತೂರಮ್ಮ ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. 13 ಮನೆಗಳು ಹಾನಿಗೀಡಾಗಿದ್ದು ಅದನ್ನು ದುರಸ್ತಿ ಮಾಡಲಾಗುವುದು.
ನರಸಮ್ಮ ಬದುಕುಳಿಯುವ ಸಾಧ್ಯತೆಗಳಿವೆ ಎಂದು ಮುಖ್ಯಮಂತ್ರಿಗಳು ಭರವಸೆ ವ್ಯಕ್ತಪಡಿಸಿದರು.ಪೊಲೀಸರು, ಅಗ್ನಿ ಶಾಮಕ ದಳ, ಗೃಹ ಇಲಾಖೆಯವರು ಪರಿಶೀಲಿಸುತ್ತಿದ್ದು, ತ್ಯಾಜ್ಯ ವಿಲೇವಾರಿಯಾದ ನಂತರ ವರದಿ ಬಂದ ಮೇಲೆ ಘಟನೆಗೆ ನಿಜವಾದ ಕಾರಣ ತಿಳಿಯಲಿದೆ. ಮೇಲ್ನೋಟಕ್ಕೆ ಸಿಲಿಂಡರ್ ಸ್ಫೋಟವಾಗಿದೆ ಎಂದು ತಿಳಿದುಬಂದಿದೆ ಎಂದರು.