ನವದೆಹಲಿ : ಸಾಮಾನ್ಯವಾಗಿ ನಾವು ಹೋಟೆಲ್ ಗಳಿಗೆ ತೆರಳಿದ್ದಾಗ ಸೇವಾ ಶುಲ್ಕ ‘ ಸರ್ವಿಸ್ ಚಾರ್ಜ್) ಅಂತ ಕೊಡುತ್ತೇವೆ. ಆದರೆ ಇದೀಗ ದೆಹಲಿ ಹೈಕೋರ್ಟ್ ಈ ಕುರಿತು ಮಹತ್ವದ ತೀರ್ಪು ನೀಡಿದ್ದು, ಹೋಟೆಲ್ ಗಳಲ್ಲಿ ಗ್ರಾಹಕರು ಸ್ವಯಂಪ್ರೇರಿತವಾಗಿ ಸೇವಾ ಶುಲ್ಕ ಕೊಡಬೇಕೆ ಹೊರತು ಅದು ಕಡ್ಡಾಯವಲ್ಲ ಎಂದು ತೀರ್ಪು ನೀಡಿದೆ.
ಹೋಟೆಲ್‌ಗಳಲ್ಲಿ ತಿಂಡಿ, ತಿನಿಸು, ಊಟದ ಬಿಲ್‌ಗಳ ಮೇಲಿನ ಸೇವಾ ಶುಲ್ಕ (ಸರ್ವೀಸ್ ಚಾರ್ಜ್) ಪಾವತಿಸುವುದು ಗ್ರಾಹಕರಿಗೆ ಕಡ್ಡಾಯವಲ್ಲ. ಅದು ಸ್ವಯಂಪ್ರೇರಿತ. ಹೋಟೆಲ್‌ಗಳು ಈ ಶುಲ್ಕವನ್ನು ಗ್ರಾಹಕರ ಮೇಲೆ ಕಡ್ಡಾಯವಾಗಿ ವಿಧಿಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ. ಇದಕ್ಕೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಪ್ರತಿಕ್ರಿಯಿಸಿ, ‘ಇದು ಗ್ರಾಹಕರಿಗೆ ಸಂದ ಜಯ’ ಎಂದಿದ್ದಾರೆ.
ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಬಿಲ್‌ಗಳ ಮೇಲೆ ಕಡ್ಡಾಯವಾಗಿ ಸೇವಾ ಶುಲ್ಕ ವಿಧಿಸುವುದನ್ನು ನಿರ್ಬಂಧಿಸಿ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಮಾರ್ಗಸೂ ಚಿ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಹೋಟೆಲ್ ಸಂಘಗಳು ಅರ್ಜಿ ಸಲ್ಲಿಸಿದ್ದವು.
ಈ ಅರ್ಜಿ ವಜಾಗೊಳಿಸಿದ ನ್ಯಾ. ಪ್ರತಿಭಾ ಎಂ. ಸಿಂಗ್ ಅವರಿದ್ದ ಪೀಠ, ಕಡ್ಡಾಯವಾಗಿ ಸೇವಾ ಶುಲ್ಕ ಪಡೆಯುವುದು ಗ್ರಾಹಕರ ಹಕ್ಕಿಗೆ ಮತ್ತು ಕಾನೂನಿಗೆ ವಿರುದ್ಧವಾದದ್ದು. ಗ್ರಾಹಕರು ಸ್ವಇಚ್ಛೆಯಿಂದ ಪಾವತಿಸಬಹುದು. ಆದರೆ ಅವರ ಮೇಲೆ ಸೇವಾ ಶುಲ್ಕವನ್ನು ಹೇರಿಕೆ ಮಾಡುವಂತಿಲ್ಲ. ಅದು ಗ್ರಾಹಕರ ದಾರಿತಪ್ಪಿಸುವ, ಮೋಸದ ಹಾಗೂ ಅನ್ಯಾಯಯುತ ವ್ಯಾಪಾರ ಪದ್ದತಿ’ ಎಂದು ಹೇಳಿದೆ. ಅಲ್ಲದೆ, ಸಿಸಿಪಿಎ ನಿರ್ಧಾರ ಪ್ರಶ್ನಿಸಿದ್ದ ಇಬ್ಬರು ಅರ್ಜಿದಾರರಿಗೆ ತಲಾ 1 ಲಕ್ಷ ರು. ದಂಡ ವಿಧಿಸಿದೆ.
ಸೇವಾ ಶುಲ್ಕ ಕೇಳಿದರೆ ನೀವೇನು ಮಾಡಬೇಕು?
ಯಾವುದೇಗ್ರಾಹಕರಿಗೆ ಸೇವಾ ಶುಲ್ಕವನ್ನು ನೀಡಲೇಬೇಕು ಎಂದು ಇನ್ನು ಮುಂದೆ ಹೋಟೆಲ್‌ಗಳು ಬಲವಂತ ಮಾಡಿದರೆ ಗ್ರಾಹಕರು ತಮ್ಮ ದೂರುಗಳನ್ನು ರಾಷ್ಟ್ರೀಯ ಗ್ರಾಹಕ ಸಹಾಯವಾಣಿ 1915 ರಲ್ಲಿ ನೋಂದಾಯಿಸಬಹುದು ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ತನ್ನ ಪ್ರಕಟಣೆ ಯಲ್ಲಿ ತಿಳಿಸಿದೆ.