ಮೈಸೂರು : ಇತ್ತೀಚಿಗೆ ಮೈಸೂರು ನಗರದ ಅರಮನೆ ಸಮೀಪದಲ್ಲಿ ಸಂಭವಿಸಿದ ಘಟನೆ ಹಿನ್ನೆಲೆಯಲ್ಲಿ ಮೈಸೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಹೀಲಿಯಂ ಅನಿಲ ಬಳಸಿ ಬಲೂನ್‌ಗಳು ಅಥವಾ ಇತರ ಯಾವುದೇ ವಸ್ತುಗಳನ್ನು ಬಳಸುವುದು ಹಾಗೂ ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಆದೇಶ ಹೊರಡಿಸಿದ್ದಾರೆ.
ಹೀಲಿಯಂ ಅನಿಲವನ್ನು ಬಲೂನ್ಗೆ ತುಂಬುವ ಸಂದರ್ಭದಲ್ಲಿ ಸಂಭವಿಸಿದ ಘಟನೆಯಿಂದ ಸಾರ್ವಜನಿಕರ ಜೀವ ಮತ್ತು ಆಸ್ತಿಗೆ ಅಪಾಯ ಉಂಟಾಗಿರುವುದನ್ನು ಗಂಭೀರವಾಗಿ ಪರಿಗಣಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಹೀಲಿಯಂ ಅನಿಲವು ಅತ್ಯಧಿಕ ಒತ್ತಡದಲ್ಲಿರುವ ಸಿಲಿಂಡರ್‌ಗಳಲ್ಲಿ ಸಂಗ್ರಹಿಸಲಾಗುತ್ತಿದ್ದು, ಅವುಗಳನ್ನು ಅಜಾಗರೂಕತೆಯಿಂದ ಅಥವಾ ಅಪ್ರಮಾಣಿತ ವಿಧಾನದಲ್ಲಿ ಬಳಸುವುದರಿಂದ ಸಿಲಿಂಡರ್ ಸ್ಫೋಟ, ಉಸಿರುಗಟ್ಟುವಿಕೆ, ಅಗ್ನಿ ಅಪಾಯ, ಸಾರ್ವಜನಿಕರಲ್ಲಿ ಭಯ ಮತ್ತು ಆಶಾಂತಿ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿವೆ.
ಹಬ್ಬಗಳು, ಜಾತ್ರೆಗಳು, ಪ್ರವಾಸಿ ಕೇಂದ್ರಗಳು, ಸಾರ್ವಜನಿಕ ಸಮಾರಂಭಗಳು ಮತ್ತು ಜನಸಂದಣಿ ಇರುವ ಸ್ಥಳಗಳಲ್ಲಿ ಹೀಲಿಯಂ ಅನಿಲ ಬಳಕೆಯು ಸಾರ್ವಜನಿಕ ಜೀವನದ ಮೇಲೆ ವಿಪರೀತ ಪರಿಣಾಮವನ್ನು ಬೀರಲಿದೆ. ಗಂಭೀರ ಹಾಗೂ ಅನಿರೀಕ್ಷಿತ ದುರಂತಗಳು ಸಂಭವಿಸುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಹೀಲಿಯಂ ಬಳಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.








