ಬೆಂಗಳೂರು : ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್ ನಲ್ಲಿ ಘೋಷಿಸಿದಂತೆ 5,300 ಕೋಟಿ ರೂ. ಆರ್ಥಿಕ ನೆರವು ಬಿಡುಗಡೆ ಮಾಡುವಂತೆ ಕೋರಿ ಸಿಎಂ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಕೇಂದ್ರ ಜಲಶಕ್ತಿ ಸಚಿವರಿಗೆ ಪತ್ರ ಬರೆದಿದ್ದಾರೆ.
ಕರ್ನಾಟಕ ರಾಜ್ಯದ ಕೇಂದ್ರದ ಭಾಗದ 2.25 ಲಕ್ಷ ಹೆಕ್ಟೇರ್ ಭೂ ಪ್ರದೇಶಕ್ಕೆ ನೀರುಣಿಸುವ ಮಹತ್ವದ ಉದ್ದೇಶದೊಂದಿಗೆ ಭದ್ರಾ ಮೇಲ್ದಂಡೆ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಹನಿ ನೀರಾವರಿ ಮೂಲಕ 2.25 ಲಕ್ಷ ಹೆಕ್ಟೇರ್ಗೆ ನೀರುಣಿಸುವ ಜತೆಗೆ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ದಾವಣಗೆರೆ ಜಿಲ್ಲೆಯ 367 ಸಣ್ಣ ನೀರಾವರಿ ಕೆರೆಗಳಿಗೆ 29.90 ಟಿಎಂಸಿ ನೀರು ಒದಗಿಸಲು 2008ರಲ್ಲಿ ಯೋಜನೆ ನಿರ್ಮಾಣ ಶುರು ಮಾಡಲಾಯಿತು. ಈವರೆಗೆ 10.121 ಕೋಟಿ ರು. ವೆಚ್ಚ ಮಾಡಲಾಗಿದ್ದು, ಇನ್ನೂ 16,125 ಕೋಟಿ ರು. ಬೇಕಾಗಬಹುದು ಎಂದು ಕೇಂದ್ರ ಸರ್ಕಾರವು ಅಂದಾಜಿಸಿದೆ.
ಡಿ.24, 2020ರಂದು ಭದ್ರಾ ಮೇಲ್ದಂಡೆ ಯೋಜನೆಯ ತಾಂತ್ರಿಕ ಆರ್ಥಿಕ ಕಾರ್ಯಸಾಧುವನ್ನು ಜಲಶಕ್ತಿ ಸಚಿವಾಲಯದ ಸಲಹಾ ಸಮಿತಿ ಅನುಮೋದಿಸಿದೆ. 2021 ಮಾರ್ಚ್ನಲ್ಲಿ 15ನೇ ಬಂಡವಾಳ ಮಂಜೂರಾತಿ ಸಮಿತಿ 16,125 ಕೋಟಿ ರೂ. ಮೊತ್ತದ ಹೂಡಿಕೆಗೆ ಅನುಮೋದನೆ ನೀಡಿದೆ. ಜೊತೆಗೆ, ಉನ್ನತ ಮಟ್ಟದ ಸಂಚಲನಾ ಸಮಿತಿ ಈಗಾಗಲೇ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಶಿಫಾರಸು ಮಾಡಿದೆ ಎಂದು ಸಿಎಂ ತಿಳಿಸಿದ್ದಾರೆ.
ಇದರ ನಡುವೆಯ 2023-24ನೇ ಸಾಲಿನ ಕೇಂದ್ರದ ಬಜೆಟ್ನಲ್ಲಿ 5,300 ಕೋಟಿ ರು. ಅನುದಾನದ ಜತೆಗೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವುದಾಗಿ ತಿಳಿಸಲಾಗಿತ್ತು. ಆದರೆ ಮೂರು ವರ್ಷವಾದರೂ ಅನುದಾನ ಬಿಡುಗಡೆ ಮಾಡಲಾಗಿಲ್ಲ. ಈ ವರ್ಷವಾದರೂ ಬಿಡುಗಡೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.