ಬೆಂಗಳೂರು : ಸಾಲ ಮರು ಪಾವತಿ ತಡವಾಗಿದ್ದಕ್ಕೆ ಮನೆಯಲ್ಲಿದ್ದ ಮಗುವನ್ನು ಮೈಕ್ರೋಫೈನಾನ್ಸ್ ಸಿಬ್ಬಂದಿಗಳು ಕರೆದೊಯ್ದ ಪ್ರಕರಣ ಇದೀಗ ಸಾಕಷ್ಟು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ವಿಚಾರವಾಗಿ ಬೆಂಗಳೂರಿನಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದು, ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್ಗಳಿಗೆ ಕಡಿವಾಣ ಹಾಕಲು ಈಗಾಗಲೇ ಕಠಿಣ ಕಾನೂನು ತಂದಿದ್ದೇವೆ. ಆದರೂ ಕೆಲವೆಡೆ ಇಂತಹ ದುರ್ವರ್ತನೆ ನಡೆಯುತ್ತಿದೆ. ಇದು ಸರಿಯಲ್ಲ. ಮಗುವನ್ನು ಕರೆದೊಯ್ದವರು ಕಠಿಣ ಹೃದಯಿಗಳು. ಮಾನವೀಯತೆ ಇಲ್ಲದವರು ಮಗುವನ್ನು ಅಪಹರಣ ಮಾಡಿದ್ದಾರೆ. ಈ ಬಗ್ಗೆ ಇಂದು ಮೈಸೂರು ಪೊಲೀಸ್ ಕಮಿಷನರ್ ಅಥವಾ ಐಜಿ ಬಳಿ ಮಾತನಾಡುತ್ತೇನೆ. ಇದಕ್ಕೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ಪೊಲೀಸರಿಗೆ ಸೂಚನೆ ನೀಡುತ್ತೇನೆ ಎಂದರು.
ಘಟನೆ ಹಿನ್ನೆಲೆ?
ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಮಗುವನ್ನು ಕರೆದೊಯ್ದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದೆಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಮೈಕ್ರೋ ಫೈನಾನ್ಸ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.