ಬೆಂಗಳೂರು : ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ನವೆಂಬರ್ 14 2024 ರಿಂದ ಜನವರಿ 24 2025 ರವರೆಗೆ 10 ವಾರಗಳ ಮಕ್ಕಳ ಸ್ನೇಹಿ ಗ್ರಾಮಪಂಚಾಯಿತಿ ಅಭಿಯಾನ ಮತ್ತು ಗ್ರಾಮಪಂಚಾಯಿತಿಗಳಲ್ಲಿ ಒಂದು ದಿನ ಮಕ್ಕಳ ವಿಶೇಷ ಗ್ರಾಮ ಸಭೆ ನಡೆಸುಉವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಆದೇಶದಲ್ಲಿ ಏನಿದೆ?
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಸರ್ಕಾರವು ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ‘ಭಾಗವಹಿಸುವಿಕೆ ಹಕ್ಕು ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಗಳಿಂದ ಮಕ್ಕಳ ಗ್ರಾಮ ಸಭೆಯನ್ನು ನಡೆಸಲು 2006 ರಿಂದ ಪ್ರತಿ ವರ್ಷವೂ ಮಕ್ಕಳ ಗ್ರಾಮ ಸಭೆಯನ್ನು ನಡೆಸಿಕೊಂಡು ಬರಲಾಗುತ್ತಿದೆ.
ಭಾರತ ಸರ್ಕಾರವು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳು, 2030 ನ್ನು ಒಪ್ಪಿಕೊಂಡಿದ್ದು, ಮಕ್ಕಳ ಆರೋಗ್ಯ ರಕ್ಷಣೆ, ಶಿಕ್ಷಣ ಅಭಿವೃದ್ಧಿ ಸಾಧನೆ ಹಾಗೂ ಹಸಿವು ತಾರತಮ್ಮ ಮತ್ತು ಶೋಷಣೆ ಕೊನೆಗೊಳಿಸುವುದಕ್ಕೆ ಬದ್ರವಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಪರಿಸ್ಥಿತಿಯನ್ನು ತಳಮಟ್ಟದಿಂದಲೇ ಗಮನಿಸಿ ಅವಶ್ಯಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವುದು ಸರ್ಕಾರದ ಎಲ್ಲಾ ಇಲಾಖೆಗಳು, ಜನಪ್ರತಿನಿಧಿಗಳು ಮತ್ತು ಸಮುದಾಯದ ಜವಾಬ್ದಾರಿಯಾಗಿದೆ. ಮಕ್ಕಳ ರಕ್ಷಣೆ ಮತ್ತು ಸರ್ವಾಂಗೀಣ ಅಭಿವೃದ್ಧಿಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೂಪಿಸಿರುವ ಹಲವು ಯೋಜನೆಗಳ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ಎಲ್ಲರ ಕರ್ತವ್ಯವಾಗಿದೆ. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳು ಹಾಗೂ ಮಕ್ಕಳಿಗೆ ಸಂಬಂಧಿಸಿದ ಸಮಗ್ರ ಅಭಿವೃದ್ಧಿಯ ಅಂಶಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ‘ಮಕ್ಕಳ ಸ್ನೇಹಿ ಮತ್ತು ಮಕ್ಕಳ ಸುರಕ್ಷಿತ’ ಪಂಚಾಯಿತಿಗಳನ್ನಾಗಿಸಲು 2020ರಿಂದ ಪ್ರತೀ ವರ್ಷವೂ ‘ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ’ವನ್ನು ಆಯೋಜಿಸಲಾಗಿದೆ. 2024-25ನೇ ಸಾಲಿಗೆ 14 ನವೆಂಬರ್ 2024 ರಿಂದ 24 ಜನವರಿ 2025 ರವರೆಗೆ, 10 ವಾರಗಳ ”ಮಕ್ಕಳ ಸ್ನೇಹಿ ಗ್ರಾಮಪಂಚಾಯಿತಿ ಅಭಿಯಾನ” ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಒಂದು ದಿನದ “ಮಕ್ಕಳ ವಿಶೇಷ ಗ್ರಾಮ ಸಭೆ”ಯನ್ನು ನಡೆಸಲು ನಿರ್ಧರಿಸಿ ಕೆಳಕಂಡಂತೆ ಕಾರ್ಯ ಯೋಜನೆಯನ್ನು ರೂಪಿಸಲಾಗಿದೆ.
1. ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ಮತ್ತು ಮಕ್ಕಳ ಗ್ರಾಮ ಸಭೆಯ ಪೂರ್ವ ಸಿದ್ಧತೆ.
2. ಮಕ್ಕಳ ಸ್ನೇಹಿ ಗ್ರಾಮಪಂಚಾಯತಿ ಅಭಿಯಾನದ 10 ವಾರಗಳ ಕಾರ್ಯಕ್ರಮ
3. ಮಕ್ಕಳ ವಿಶೇಷ ಗ್ರಾಮ ಸಭೆ
4. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಜವಾಬ್ದಾರಿ.
ಈ ಎಲ್ಲಾ ಮೇಲ್ಕಂಡ ಅಂಶಗಳ ಹಿನ್ನೆಲೆಯಲ್ಲಿ ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯವು ಹೊರಡಿಸಿರುವ ವಿಸ್ತ್ರತ ಸುತ್ತೋಲೆಯನ್ನು ಅನುಬಂಧಿಸಿ ತಮಗೆ ಸಲ್ಲಿಸಿದ್ದು ಅನುಬಂಧ -3 ರ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಕೋರಿರುವ ಮಾಹಿತಿಯನ್ನು ತಮ್ಮ ಪಂಚಾಯಿತಿ ವ್ಯಾಪ್ತಿಯ ಸಂಬಂಧಿಸಿದವರಿಗೆ ಒದಗಿಸುವಂತೆ ಮತ್ತು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲಾ ರೀತಿಯ ಆಡಳಿತಾತ್ಮಕ ಕ್ರಮವಹಿಸುವಂತೆ ತಿಳಿಸಿದೆ.